

ಬೆಂಗಳೂರು: ಕನ್ನಡದ ‘ನಾಗಿಣಿ’ ಸೇರಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ ಇದೀಗ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’ ನಾಳೆ ಬಿಡುಗಡೆಯಾಗುತ್ತಿದೆ. ಇದೊಂದು ಪ್ರಯಾಣದ ಕಥೆಯಾಗಿದ್ದು, ‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ, ‘ಕೆಟಿಎಂ’ ನಟಿ ಸಂಜನಾ ದಾಸ್, ವಿನ್ಯಾ ರೈ, ಶರತ್ ಲೋಹಿತಾಶ್ವ, ವೈಜನಾಥ ಬಿರಾದಾರ್ ಕಲಾ ಬಳಗದಲ್ಲಿದ್ದಾರೆ. ಸಿನಿಮಾದ ಬಗ್ಗೆ ಹಯದವನ, ‘ಇದೊಂದು ಹುಡುಕಾಟದ ಕಥೆ. ನೆಲಮಂಗಲದಿಂದ ಉತ್ತರ ಭಾರತಕ್ಕೆ ಪ್ರವಾಸಕ್ಕೆ ತೆರಳುವ ಹುಡುಗನೊಬ್ಬನ ಕಥೆ. ಪರ್ಸ್, ಮೊಬೈಲ್ ಇಲ್ಲದೆ ಹೋಗುವ ಆತ ಹೇಗೆ ತನ್ನ ಗುರಿ ತಲುಪುತ್ತಾನೆ? ಎಂಬುದೇ ಸ್ಟೋರಿಲೈನ್. ಕುಟುಂಬದ ಮೌಲ್ಯಗಳು, ಪ್ರೀತಿ ಹೀಗೆ ಎಲ್ಲ ಅಂಶಗಳನ್ನು ಸೇರಿಸಲಾಗಿದೆ. ಇಲ್ಲಿ ಕನ್ನಡ ಹುಡುಗ ಹಾಗೂ ಮರಾಠಿ ಹುಡುಗಿಯ ಲವ್ಸ್ಟೋರಿ, ಕನ್ನಡ ಹುಡುಗು-ತಮಿಳು ಹುಡುಗಿಯ ಪ್ರಯಾಣದ ಅಂಶಗಳು, ತಂದೆ-ಮಗನ ಬಾಂಧವ್ಯ ಜತೆಗೆ ಸಮಕಾಲೀನ ವಿಷಯಗಳಿದ್ದು, ಎಲ್ಲರಿಗೂ ಕನೆಕ್ಟ್ ಆಗುವ ಅಂಶಗಳಿವೆ. ಬೆಂಗಳೂರು, ವಿಜಯಪುರ, ಮಹಾರಾಷ್ಟ್ರದ ಸೊಲ್ಲಾಪುರ, ಪಂಡರಾಪುರ, ಉತ್ತರಾಖಂಡ ಸೇರಿ ಹಲವೆಡೆ ಶೂಟಿಂಗ್ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ.
ಸವಾಲು ವಿಭಿನ್ನ: ಹಯವದನ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಡೈರಕ್ಟರ್ ಕ್ಯಾಪ್ ಧರಿಸಿದ್ದಾರೆ. ಈ ಮೊದಲು ಅವರು ಕಿರುತೆರೆಯ ಹಲವಾರು ಧಾರಾವಾಹಿಗಳಿಗೆ ಕಾರ್ಯನಿರ್ವಹಿಸಿದ್ದಾರೆ. ಮೊದಲ ಪ್ರಯತ್ನದ ಬಗ್ಗೆ, ‘ಚಿತ್ರದ ಟ್ರೇಲರ್, ಸಾಂಗ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದು ನಮಗೂ ಧೈರ್ಯ ಬಂದಿದೆ. ಕಿರುತೆರೆಯಲ್ಲಿ ವರ್ಷವಿಡೀ ಕಥೆ ಹೇಳಿದರೆ, ಇಲ್ಲಿ ಎರಡು ತಾಸಿಗೆ ಹೇಳಬೇಕು. ಹಾಗಾಗಿ, ಸವಾಲುಗಳು ವಿಭಿನ್ನ. ಎಲ್ಲವೂ ಕಲಿಕೆ. ಈ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆಯಿದೆ’ ಎನ್ನುತ್ತಾರೆ.