ಮಕ್ಕಳು ಗುರಿಯತ್ತ ಗಮನ ಕೇಂದ್ರೀಕರಿಸಬೇಕು, ಉದ್ಯಮಿ ರಾಮನಂದನ ಹೆಗಡೆ ಸಲಹೆ, ಹವ್ಯಕ ಹಬ್ಬದಲ್ಲಿ ಪ್ರತಿಭಾ ಪುರಸ್ಕಾರ, ಸನ್ಮಾನ

IMG_20240811_205043_688.jpg
Published on

ಹುಬ್ಬಳ್ಳಿ: "ಪಕ್ಷಿಯ ಅಕ್ಷಿಯಲ್ಲದೇ ಬೇರೆನೂ ಕಾಣುತ್ತಿಲ್ಲ' ಎಂದು ಅರ್ಜುನನು ತಮ್ಮ ಗುರುಗಳಿಗೆ ಹೇಳಿದಂತೆ ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನ ಕೇಂದ್ರೀಕರಿಸಿದರೆ ಸಾಧನೆ ಖಂಡಿತವಾಗಿಯೂ ಸಾಧ್ಯವಾಗುತ್ತದೆ ಎಂದು ನಂದು ಕೆಮಿಕಲ್ಸ್ ಚೇರ್ಮನ್ ರಾಮನಂದನ ಹೆಗಡೆ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ಹವ್ಯಕ ಭವನದಲ್ಲಿ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಭಾನುವಾರ ಏರ್ಪಡಿಸಿದ್ದ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಪಡಬೇಕು. ಯಾವುದೇ ಅಡ್ಡಿ ಬಂದರೂ ಶಿಕ್ಷಣ ರಂಗದಲ್ಲಿ ಅಂದುಕೊಂಡಿದ್ದನ್ನು ಮಾಡುವವರೆಗೆ ಕೈಬಿಡಬಾರದು. ಮುಂದೆ ಜೀವನದಲ್ಲಿ ಸಮಾಜದಿಂದ ಪಡೆದಿದ್ದಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೇ ವಾಪಸ್ ನೀಡಿದಾಗ ಎಲ್ಲೆಡೆ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದರು.

ಹವ್ಯಕ ಸಮುದಾಯವು ಅತಿ ಸಣ್ಣದಾಗಿದ್ದರೂ ಸಮಾಜದವರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹೆಚ್ಚು ಅಪೇಕ್ಷೆ ಪಡದೇ ಕೆಲಸ ಕಾರ್ಯಗಳನ್ನು ಮಾಡಿದಾಗ ಫಲ ತಾನಾಗಿಯೇ ಸಿಕ್ಕೇ ಸಿಗುತ್ತದೆ. ಹಾಗೆಯೇ ಗುರಿ ತಲುಪಲು ಗುರು ಬೇಕೆಬೇಕು, ಅನುಭವವೂ ಕೂಡ ದೊಡ್ಡ ಗುರುವಾಗಬಲ್ಲದು ಎಂದು ತಮ್ಮದೇ ಅನುಭವ ಹಂಚಿಕೊಂಡರು.

ಮಿಸ್ ಯುನಿವರ್ಸಲ್ ಪಿಟೈಟ್ ಡಾ. ಶ್ರುತಿ ಹೆಗಡೆ ಮಾತನಾಡಿ, ಯಾರೇ ಆಗಲಿ ಸಾಧನೆ ಮಾಡಲು ಸಮಾಜ, ಜನರ ಸಹಾಯ, ಪ್ರೋತ್ಸಾಹ ಅಗತ್ಯವಾಗಿದೆ. ಅದರಲ್ಲೂ ಸಮುದಾಯದ ಪ್ರೋತ್ಸಾಹ ಬಹಳ ನೆರವಾಗುತ್ತದೆ. ಎಲ್ಲರ ಸಹಕಾರದಿಂದಲೇ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಕಂಡ ಕನಸನ್ನು ನನಸು ಮಾಡಿಕೊಳ್ಳಲು ನಾವು ನಮ್ಮದೇಯಾದ ದಾರಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಮನುಷ್ಯನಿಗೆ ಬಹಳಷ್ಟು ಅವಕಾಶಗಳು ಒಲಿದು ಬರುತ್ತವೆ. ಆದರೆ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಭೆ ಅನಾವರಣ ಮಾಡಬೇಕು. ಇದೇ ರೀತಿ ವಿದ್ಯಾರ್ಥಿಗಳು, ಮಕ್ಕಳು ತಮ್ಮದೇ ಆದ ದಾರಿಯಲ್ಲಿ ಸಾಧನೆ ಮಾಡಬೇಕು ಎಂದರು.

ಉದ್ಯಮಿ ಶಿವರಾಮ ಹೆಗಡೆ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಹವ್ಯಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ಟ, ಭವನ ನಿರ್ಮಾಣಕ್ಕೆ ಕೈಗೊಂಡ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಮಾಜದ ದಾನಿಗಳಿಂದಾಗಿ ಶ್ರೇಷ್ಠ ದರ್ಜೆಯ ಭವನ ನಿರ್ಮಾಣವಾಗಿದೆ. ವಿದ್ಯಾರ್ಥಿವೇತನ ನೀಡುವ ಸಲುವಾಗಿ ದತ್ತಿ ನಿಧಿ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪಿಯುಸಿಯಲ್ಲಿ ಸಾಧನೆ ಮಾಡಿದ ಸೃಜನಾ, ದೀಪಾ ಕೆ., ತುಷಾರ್ ಭಟ್ಟ, ಪಲ್ಲವಿ, ಅನನ್ಯಾ, ಪ್ರಜ್ಞಾ, ಶ್ರೇಯಾ ಹಾಗೂ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಅನ್ವಿತಾ ಹೆಗಡೆ, ಸಂಪದಾ ಭಟ್ಟ, ನವ್ಯಶ್ರೀ, ನಂದನ ಭಟ್ಟ, ಶಶಿಧರ, ಚಿನ್ಮಯ ಹಾಗೂ ಇತರರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೈದ್ಯಕಿಯ ಕ್ಷೇತ್ರದ ಡಾ. ಗೋವಿಂದ ಹೆಗಡೆ, ಸಾಹಿತ್ಯ ಕ್ಷೇತ್ರದ ಡಾ. ಜಿ.ಎಂ. ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಭವನದಲ್ಲಿ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಡುಗೆ ಸ್ಪರ್ಧೆ, ಜಾನಪದ ಗೀತೆ, ಭಾಷಣ ಸ್ಪರ್ಧೆಗಳು ನಡೆದವು. ಹವ್ಯಕ ಭೋಜನ ವಿಶಿಷ್ಟವಾಗಿತ್ತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಭೂ ಕೈಲಾಸ ಪ್ರದರ್ಶನ ಪ್ರೇಕ್ಷಕರ ಮನ ತಣಿಸಿತು. ಹವ್ಯಕ ಮಹಿಳಾ ಮಂಡಳದ ವೀಣಾ ಹೆಗಡೆ, ಅನಿತಾ ಭಟ್ಟ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net