ಗತ್ತಿನಿಂದ ಕೆಲಸ ಮಾಡಿ ಇಲ್ಲ ಮನೆಗೆ ಹೋಗಿ !; ಅಧಿಕಾರಿಗಳಿಗೆ ಉಪ ಲೋಕಾಯುಕ್ತರ ಖಡಕ್ ಸೂಚನೆ

15 HVR 2
Published on

ಹಾವೇರಿ: ಅಧಿಕಾರಿಗಳಲ್ಲಿ ದೂರುದಾರರಿಗೆ ಉತ್ತರ ನೀಡುವಷ್ಟು ಅಧಿಕಾರಿಗಳಿಗೆ ಗತ್ತು ಇರಬೇಕು. ಮಾಹಿತಿ ಪಡೆದುಕೊಂಡು ಬರದೇ ತಡಬಡಾಯಿಸಬಾರದು. ಯಾರಿಗೂ ಹೇದರದೆ ಕಾನೂನಿನ ಪ್ರಕಾರ ಕೆಲಸ ಮಾಡಿದಲ್ಲಿ ಇಂತಹ ಸನ್ನಿವೇಶಗಳು ಬರುವುದಿಲ್ಲ. ಕೆಲಸ ಮಾಡುವ ಮನಸ್ಸು ಇಲ್ಲದಿದ್ದರೆ ಮನೆಗೆ ಹೋಗಿ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಲೋಕಾಯುಕ್ತ ವ್ಯಾಪ್ತಿಯ ಹಾವೇರಿ ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು,

ಅನುಮತಿ ಪಡೆಯದೆ ನಿರ್ಮಾಣ ಮಾಡಿದ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು. ರಸ್ತೆ ಹಾಗೂ ಸರ್ಕಾರಿ ಆಸ್ತಿಗಳನ್ನು ಅತಿಕ್ರಮಣ ಮಾಡಿದವರಿಗೆ ನೋಟಿಸ್ ಜಾರಿ ಮಾಡಬೇಕು. ಸರ್ಕಾರ ಸಂಬಳ ನೀಡುತ್ತದೆ, ನಿಯತ್ತಾಗಿ ಕೆಲಸ ಮಾಡಿ. ಕೆಲಸಕ್ಕೆ ಮೋಸ ಮಾಡಬೇಡಿ, ಕೆಲಸ ಮಾಡುವ ಮನಸ್ಸು ಇಲ್ಲ ಅಂದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಖಾರವಾಗಿ ಹೇಳಿದರು.

ಕಾಮಗಾರಿ ಮಾಡದೆ ಹಣ ಡ್ರಾ ಮಾಡಿದ ಕುರಿತು, ಕಡಿಮೆ ಬೆಲೆಗೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಅಧಿಕ ಮೊತ್ತಕ್ಕೆ ಬಿಲ್ ಹಾಕಿದ ಬಗ್ಗೆ, ತುಂಗಾ ಮೇಲ್ದಂಡೆ ಯೋಜನೆ ಕಳಪೆ ಕಾಮಗಾರಿ, ರಸ್ತೆ ಅತಿಕ್ರಮಣ, ಕಾಮಗಾರಿ ಮಂದಗತಿ, ಕೆರೆ ಕಟ್ಟೆ ಹಾಳುಮಾಡಿದ ಬಗ್ಗೆ, ವೈಜ್ಞಾನಿಕವಾಗಿ ಸೇತುವೆ ಎತ್ತರ ಮಾಡಿದ್ದರಿಂದ ರೈತರ ಬೆಳೆ ಹಾನಿ, ಅನಧಿಕೃತ ಕಟ್ಟಡ ಸೇರಿದಂತೆ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒಂದು ತಿಂಗಳೊಳಗಾಗಿ ನೀಡದಿದ್ದರೆ ಅಧಿಕಾರಿಗಳ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕಾರ್ಯಾಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಪತ್ರಿಕಾ ರಂಗ ಎಲ್ಲರೂ ಒಂದೇ ದಿಕ್ಕಿನಲ್ಲಿ ಸಾಗಿದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಹಾಗೂ ಮಾಧ್ಯಮದವರ ಸಹಕಾರ ಅಗತ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ ಹಾಗೂ ಉಪ ನಿಬಂಧಕ ಅರವಿಂದ ಎನ್.ವಿ., ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಡಿಎಸ್‌ಪಿ ಬಿ.ಪಿ.ಚಂದ್ರಶೇಖರ, ಇತರರಿದ್ದರು.

ಸುಳ್ಳು ಕೇಸ್‌ಗಳಿಗೆ ನ್ಯಾಯಮೂರ್ತಿಗಳು ಗರಂ :

ಕಾಮಗಾರಿಗಳು ಕಳಪೆ ಎಂದು ತಜ್ಞರಿಂದ ವರದಿ ಪಡೆಯಬೇಕು. ಕಾಮಗಾರಿ ಕಳಪೆ ಎಂದು ನೀವೇ ಹೇಗೆ ನಿರ್ಣಯ ಮಾಡುತ್ತೀರಿ ಎಂದು ವಿವಿಧ ಪ್ರಕರಣಗಳ ಕಳಪೆ ಕಾಮಗಾರಿ ಎಂದು ದೂರು ನೀಡಿದ ದೂರುದಾರರನ್ನು ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಪ್ರಕರಣ ಹಿಂಪಡೆಯುತ್ತೇನೆ ಎಂದ ದೂರುದಾರ ರುದ್ರಗೌಡ ಅವರಿಗೆ, ನಾವೆಲ್ಲ ಕೂಲಿ ಆಳುಗಳಾ, ನೀನು ದೂರು ಕೊಟ್ಟಾಗ ತೆಗೆದುಕೊಳ್ಳಬೇಕು. ವಾಪಸ್ ಬೇಕು ಎಂದಾಗ ಸುಮ್ಮನಿರಬೇಕಾ ? ಸುಳ್ಳು ಕೇಸ್ ದಾಖಲಿಸಿದರೆ ಮೂರು ವರ್ಷ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ಮುಚ್ಚಳಿಕೆ ಬರೆಸಿಕೊಂಡರು.

ಕಚೇರಿಗಳಲ್ಲಿ ರಜಿಸ್ಟರ್ ಕಡ್ಡಾಯ

ನಗರಸಭೆ, ಉಪ ನೋಂದಣಿ ಕಚೇರಿ, ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಕಚೇರಿಗೆ ಬಂದಾಗ ತಮ್ಮ ಬಳಿ ಇದ್ದ ಹಣದ ವಿವರ ಬರೆದಿದ್ದಾರೆ. ಮರಳಿ ಹೋಗುವ ಹಣದ ವಿವರಣೆ ಬರಲ್ಲ. ಹಾಗಾಗಿ, ನಗದು ವಹಿ, ಚಲನವಲನ ವಹಿ ಕಡ್ಡಾಯವಾಗಿ ನಿರ್ವಹಣೆ ಮಾಡಲು ಹಾಗೂ ಬಯೋಮೆಟ್ರಿಕ್ ಕಡ್ಡಾಯ ಅಳವಡಿಕೆಗೆ ಸೂಚಿಸಲಾಗಿದೆ ಎಂದರು ಪ ಲೋಕಾಯುಕ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net