ಹಾವೇರಿ ವಿವಿ ವಿವಾದಿತ ಪಠ್ಯ ವಾಪಸ್; ವಿಜಯವಾಣಿ ವರದಿ ಪರಿಣಾಮ; ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಪಾಠಕ್ಕೆ ಬ್ರೇಕ್

Haveri VV Kannada book story
Published on

ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಬಿಎ ಪ್ರಥಮ ಸೆಮಿಸ್ಟರ್‌ನ ಕನ್ನಡ ಭಾಷೆಯ ಬೆಳಗು ಪಠ್ಯಪುಸ್ತಕದಲ್ಲಿ ಭಾರತಾಂಬೆಗೆ ಅವಮಾನಿಸುವ ಅಂಶಗಳು ಇರುವ ಹಿನ್ನೆಲೆಯಲ್ಲಿ ರಾಮಲಿಂಗಪ್ಪ ಟಿ. ಬೇಗೂರ ಬರೆದ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಪಾಠವನ್ನು ಕೈಬಿಡಲಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯ ಘೋಷಿಸಿದೆ.

ಪಾಠದಲ್ಲಿ ಭಾರತಾಂಬೆಯ ಕಲ್ಪನೆ, ರಾಷ್ಟ್ರೀಯತೆಯ ಕಲ್ಪಿತ ಚಹರೆಗಳು, ಭುವನೇಶ್ವರಿ ದೇವಿಯ ಕಲ್ಪನೆ, ರಾಷ್ಟ್ರೀಯತೆ, ಅತಿ ರಾಷ್ಟ್ರೀಯತೆ, ಎಂಬಿತ್ಯಾದಿ ಅವಹೇಳನಕಾರಿ ಬರಹದ ಕುರಿತು ಜ.30ರಂದು ‘ಹಾವೇರಿ ವಿವಿ ಪಠ್ಯದಲ್ಲೂ ಭಾರತಾಂಬೆಗೆ ಅವಮಾನ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.

ಮೊದಲು ಕರ್ನಾಟಕ ವಿಶ್ವವಿದ್ಯಾಲಯ ಈ ಪಾಠವನ್ನು ಪ್ರಕಟಿಸಿತ್ತು. ಈ ಕುರಿತು ‘ವಿಜಯವಾಣಿ’ ಬೆಳಕು ಚೆಲ್ಲಿತ್ತು. ನಂತರ ವಿವಿಧ ಸಂಘಟನೆಗಳ ಪ್ರತಿಭಟನೆಯಿಂದ ಎಚ್ಚೆತ್ತ ಕವಿವಿ ಪಾಠವನ್ನು ಕೈಬಿಟ್ಟಿತ್ತು. ಆದರೆ, ಇದೇ ಪಠ್ಯವನ್ನು ಎರವಲು ಮಾಡಿಕೊಂಡಿದ್ದ ಹಾವೇರಿ ವಿವಿ ಈ ಪಠ್ಯದ ಬಗ್ಗೆ ಯಾವ ಕ್ರಮವನ್ನೂ ಜರುಗಿಸಿರಲಿಲ್ಲ. ಈ ಕುರಿತು ‘ವಿಜಯವಾಣಿ’ ವರದಿ ಮೂಲಕ ಎಚ್ಚರಿಸಿತು. ಎಬಿವಿಪಿ ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿವಿ ಸಭಾಂಗಣದಲ್ಲಿ ಶನಿವಾರ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಪಾಠದಲ್ಲಿ ವಿವಾದಿತ ಅಂಶಗಳ ಕುರಿತು ಆಕ್ಷೇಪಣೆ ಉಂಟಾಗಿದ್ದರಿಂದ ಈ ಪಠ್ಯವನ್ನು ತಕ್ಷಣದಿಂದಲೇ ಹಿಂಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕುಲಸಚಿವ ಪ್ರೊ.ಎಸ್.ಟಿ.ಬಾಗಲಕೋಟಿ ತಿಳಿಸಿದ್ದಾರೆ.

ಪರೀಕ್ಷೆಗೆ ಈ ಪ್ರಶ್ನೆ ಕೇಳಲ್ಲ

ಮೊದಲನೇ ಸೆಮಿಸ್ಟರ್‌ನ ಅಂತಿಮ ಪರೀಕ್ಷೆಯಲ್ಲಿ ಆಕ್ಷೇಪಿತ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಇರುವುದಿಲ್ಲ ಎಂದು ವಿವಿ ಸ್ಪಷ್ಟನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net