ಎಷ್ಟೇ ಒತ್ತಡ ಬಂದರೂ ಅಧ್ಯಯನ ಕೈಬಿಡಬೇಡಿ; ಹಾವೇರಿ ವಿವಿ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಜಿಪಂ ಸಿಇಒ ರುಚಿ ಬಿಂದಲ್ ಸಲಹೆ

31 HVR 10
Published on

ಹಾವೇರಿ: ಕಷ್ಟದ ನಡುವೆಯೂ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ ಸಾಧನೆಯೆಡೆಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರುಚಿ ಬಿಂದಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು,

ನಗರದ ಹೊರವಲಯ ಕೆರಿಮತ್ತಿಹಳ್ಳಿಯಲ್ಲಿ ಇರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 2024-2025ನೇ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಒಕ್ಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಈಗಲೇ ನಿರ್ಧಾರ ಮಾಡಿಕೊಳ್ಳಬೇಕು. ಶಿಕ್ಷಣದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಒತ್ತಡಗಳು ಬರುತ್ತವೆ. ಮದುವೆ ಹಾಗೂ ಮುಂದಿನ ವಿದ್ಯಾಭ್ಯಾಸವನ್ನು ಏಕೆ ಮಾಡುತ್ತೀರಾ? ಎಂಬ ಪ್ರಶ್ನೆಗಳು ಬರುವುದು ಸಾಮಾನ್ಯ, ಅವುಗಳನ್ನು ಎದುರಿಸಿ ಜೀವನದಲ್ಲಿ ಸಾಧನೆಯತ್ತ ಮುಖ ಮಾಡಬೇಕು. ನಾನೂ ಸಹ ಯುಪಿಎಸ್ಸಿ ಪರೀಕ್ಷೆ ಬರೆಯಬೇಕಾದರೆ 4 ಬಾರಿ ಅನುತೀರ್ಣವಾದರೂ ಪ್ರಯತ್ನ ಬಿಡದೇ 5ನೇ ಬಾರಿಗೆ ಯುಪಿಎಸ್ಸಿ ಪಾಸಾದೆ. ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಸಮಯ ಪ್ರಜ್ಞೆ ಬೆಳೆಸಿಕೊಂಡು, ಸತತ ಪ್ರಯತ್ನ ಮಾಡುತ್ತಿರಬೇಕು ಎಂದು ಕರೆ ನೀಡಿದರು.

ವಿವಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ಅಮೂಲ್ಯವಾದದ್ದು. 2024-2025ನೇ ಸಾಲಿನ ವಿದ್ಯಾರ್ಥಿಗಳು ನಮ್ಮ ವಿವಿಯ ಮೊದಲನೇ ಬ್ಯಾಚ್ ಆಗಿದ್ದು, ವಿವಿಯ ವಿದ್ಯಾರ್ಥಿಗಳು ಉನ್ನತ ಸ್ಥಾನ ಏರುವ ಮೂಲಕ ವಿವಿ ಘನತೆ ಹೆಚ್ಚಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವೆ ಡಾ.ರೇಣುಕಾ ಮೇಟಿ, ಜಿಮಖಾನ ವಿಭಾಗದ ಅಧ್ಯಕ್ಷೆ ಡಾ.ಕವಿತಾ ನಾಯಕ, ಉಪಾಧ್ಯಕ್ಷ ಡಾ.ರವೀಂದ್ರ ಬಣಕಾರ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net