ಗಾಂಜಾ ದಂಧೆಕೋರರ ಭೇಟೆಯಾಡಿದ ಖಾಕಿ ಪಡೆ; 6.99 ಲಕ್ಷ ರೂ. ಮೌಲ್ಯದ 13.98 ಕೆಜಿ ಗಾಂಜಾ ವಶಕ್ಕೆ; ಐವರ ಬಂಧನ, ಐಫೋನ್, ಕಾರು ಜಪ್ತಿ

7 Ganja Arrest
Published on

ಹಾವೇರಿ: ಗಾಂಜಾ ಕಳ್ಳ ಸಾಗಣೆ ಮಾಡುತ್ತಿದ್ದ ಗ್ಯಾಂಗ್‌ನ ಹೆಡೆಮುರಿ ಕಟ್ಟಿದ ಹಾವೇರಿ ಶಹರ ಠಾಣೆ ಪೊಲೀಸರು ನಾಗೇಂದ್ರನಮಟ್ಟಿ ಬಳಿ ಶಾಂತಿನಗರದಲ್ಲಿ ಐವರನ್ನು ಬಂಧಿಸಿ, 6,99,100 ರೂ. ಮೌಲ್ಯದ 13 ಕೆಜಿ 982 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ಹಾವೇರಿ ನಾಗೇಂದ್ರನಮಟ್ಟಿ ನಿವಾಸಿ ಯಾಸೀನ್ ಮಹಮ್ಮದ್‌ಜಾಫರ್ ನಾಶೀಪುಡಿ, ಗದಗ ತಾಜ್‌ನಗರ ನಿವಾಸಿ ಅಬ್ದುಲ್ ರೆಹಮಾನ್ ಖಾಜಾಸಾಬ ಮೈನುದ್ದೀನ್ ಡಂಬಳ, ಬ್ಯಾಡಗಿಯ ಕದರಮಂಡಲಗಿ ರಸ್ತೆಯ ಸಂಜಯ ರವಿ ಛತ್ರದ, ಬ್ಯಾಡಗಿ ಹಂಸಭಾವಿ ರಸ್ತೆ ನಿವಾಸಿ ಕಾರ್ತಿಕ ರಮೇಶ ಪೂಜಾರ ಹಾಗೂ ಬ್ಯಾಡಗಿ ಬೆಟ್ಟದ ಮಲ್ಲೇಶ್ವರ ನಗರದ ಶಿವರಾಜ ದೇವೀಂದ್ರಪ್ಪ ಕರೆಮ್ಮನವರ ಬಂಧಿತ ಆರೋಪಿಗಳು.

ಆರೋಪತರು ಓಡಿಶಾ ರಾಜ್ಯದಿಂದ ಅಕ್ರಮವಾಗಿ ಗಾಂಜಾ ತಂದು ಬೇರೆಡೆ ಸಾಗಣೆ ಮಾಡಲು, ನಂತರ ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಪೊಲೀಸರು ದಾಳಿ ನಡೆಸಿ, 13 ಕೆಜಿ 982 ಗ್ರಾಂ ಗಾಂಜಾ, ಒಂದು ಮಾರುತಿ ಸುಜುಕಿ ಕಾರು (ಕೆಎ 68, 5740), ಒಂದು ಐಫೋನ್ ವಶಪಡಿಸಿಕೊಂಡಿದ್ದಾರೆ.

ಬಂಧಿತರೆಲ್ಲರೂ ಬಹುತೇಕ 20ರಿಂದ 24 ವರ್ಷ ವಯಸ್ಸಿನವರು. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಯಾಸೀನ್ ಮಹಮ್ಮದ್ ವಿರುದ್ಧ ಈಗಾಗಲೇ ಸಿಇಎನ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಉಳಿದವರು ಮೊದಲ ಬಾರಿಗೆ ಬಲೆಗೆ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‌ಪಿ ಶ್ಲಾಘನೆ

ಎಸ್‌ಪಿ ಅಂಶುಕುಮಾರ, ಎಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಎಂ.ಎಸ್ ಪಾಟೀಲ ಮಾರ್ಗದರ್ಶನದಲ್ಲಿ ಹಾವೇರಿ ಶಹರ ಠಾಣೆಯ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಪಿಎಸ್‌ಐ ಬಿ.ಜಿ ದೊಡ್ಡಮನಿ, ಸಿಬ್ಬಂದಿ ಯಲ್ಲಪ್ಪ ತಹಸೀಲ್ದಾರ್, ಡಿ.ಎಸ್ ಬಿಲ್ಲರ, ಎಂ.ಎಸ್ ಲಮಾಣಿ, ಎಂ.ಮಾಯಗೊಂಡರ, ನೀಲಕಂಠ ಲಿಂಗರಾಜ, ಚನ್ನಬಸಪ್ಪ ಆರ್.ಬಿ., ಶಂಕರ ಲಮಾಣಿ, ವಿಶ್ವನಾಥ ಕುದರಿಹಾಳ, ಚಂದ್ರಕಾಂತ ಎಲ್.ಆರ್. ತಂಡದಲ್ಲಿದ್ದರು. ತಂಡದ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net