ಟ್ರಂಪ್ ಹೆಸರಲ್ಲಿ ವಂಚಿಸುತ್ತಾರೆ ಹುಷಾರ್ !; ನೂರಾರು ಜನರಿಂದ ಕೋಟ್ಯಂತರ ರೂ. ವಂಚನೆ; ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಮೋಸ

Cyber Crime Mobile
Published on

ಹಾವೇರಿ: ತಂತ್ರಜ್ಞಾನ ಬದಲಾದಂತೆ ಸೈಬರ್ ಖದೀಮರ ಕೃತ್ಯಗಳೂ ಬದಲಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಲ್ಲಿ ವಂಚನೆಗೆ ಇಳಿದಿದ್ದಾರೆ. ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ 150ಕ್ಕೂ ಅಧಿಕ ಜನರಿಂದ ಕೋಟಿ ರೂ.ಗೂ ಅಧಿಕ ಹಣ ಸುಲಿದಿದ್ದಾರೆ.

ಟ್ರಂಪ್ ಹೆಸರಲ್ಲಿ ನಕಲಿ ಆ್ಯಪ್ ಸೃಷ್ಟಿಸಿ, ಟ್ರಂಪ್ ಹೋಟೆಲ್ ರೆಂಟಲ್ ಎಂಬ ಹೆಸರಿನಲ್ಲಿ ವಿಡಿಯೋ ಲಿಂಕ್ ಕಳುಹಿಸುವ ಸೈಬರ್ ಕಳ್ಳರು ಎಐ ವಿವಿಯೋ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಲಿಂಕ್ ಕಾಣಿಸುವಂತೆ ಪ್ರಚುರಪಡಿಸುತ್ತಾರೆ. ಆಸೆ ಆಮಿಷ ಒಡ್ಡಿ ಜನರ ಖಾತೆಯಿಂದ ಹಣ ರವಾನಿಸಿಕೊಂಡು ವಂಚಿಸುತ್ತಾರೆ.

ಹಾವೇರಿಯ ಅನಿಲ ಎಂಬುವರಿಗೆ ‘ಟ್ರಂಪ್ ಹೋಟೆಲ್ ರೆಂಟಲ್’ ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋ ಲಿಂಕ್ ಕಾಣಿಸಿಕೊಂಡಿತ್ತು. ಕಡಿಮೆ ಅವಧೀಯಲ್ಲಿ ಹೆಚ್ಚು ಹಣ ಗಳಿಸಬಹುದು ಎಂದು ತೋರಿಸಲಾಗಿತ್ತು. ಲಿಂಕ್ ಕ್ಲಿಕ್ ಲಾಗಿನ್ ಆಗುತ್ತಿದ್ದಂತೆ 1,500 ರೂ. ಖಾತೆ ಸಕ್ರಿಯಗೊಳಿಸುವುದಾಗಿ ಹಣ ಪಡೆದಿದ್ದಾರೆ. ನಂತರ ಕಂಪನಿಗಳ ವಿಮರ್ಷೆ ಬರೆಯುವುದು, ಮತ್ತಿತರ ಟಾಸ್ಕ್ ಕೊಟ್ಟು ಡ್ಯಾಶ್ ಬೋರ್ಡ್‌ನಲ್ಲಿ ಹೆಚ್ಚಿನ ಲಾಭಾಂಶ ತೋರಿಸಿದ್ದಾರೆ. ಆ ಹಣ ಪಡೆಯಲು ತೆರಿಗೆ ಕಟ್ಟಬೇಕೆಂದು 5.93 ಲಕ್ಷ ರೂ. ರವಾನಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಂಪ್ ಹೆಸರಲ್ಲಿ ಲಿಂಕ್ ಕಳುಹಿಸಿ ಬೆಂಗಳೂರು, ಹಾವೇರಿ, ಮಂಗಳೂರು, ತುಮಕೂರು, ಹುಬ್ಬಳ್ಳಿ- ಧಾರವಾಡ, ಕಲಬುರ್ಗಿ, ಸೇರಿದಂತೆ ವಿವಿಧೆಡೆ ವಂಚನೆಯಾಗಿರುವ ಕುರಿತು ದೂರುಗಳು ದಾಖಲಾಗಿವೆ. ಹಾವೇರಿ ಜಿಲ್ಲೆಯಲ್ಲೇ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ನಕಲಿ ಲಿಂಕ್ ಒತ್ತಬೇಡಿ..

ಟ್ರಂಪ್ ಹೋಟೆಲ್ ರೆಂಟಲ್ ಹೆಸರಿನ ಲಿಂಕ್ ಮೂಲಕ ದೇಶಾದ್ಯಂತ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ. ಹಾಗಾಗಿ ಸಾರ್ವಜನಿಕರು ಅಪರಿಚಿತ ಲಿಂಕ್‌ಗಳು ಬಂದಾಗ ಅವುಗಳನ್ನು ನಿರಾಕರಿಸಿ, ಜಾಗೃತೆಯಿಂದ ಇರಬೇಕು. ಹಬ್ಬದ ಸಮಯದಲ್ಲಿ ಆಫರ್ ಹೆಸರಲ್ಲಿ ಇಂತಹ ನಕಲಿ ಲಿಂಕ್‌ಗಳು ಹರಿದಾಡುತ್ತವೆ. ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಜಿಲ್ಲಾ ಪೊಲೀಸರು ಕೋರಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net