ಶಿಗ್ಗಾಂವಿ: ಆಶ್ರಯ ಕಾಲನಿಯಲ್ಲಿ ಮನೆ ಹಂಚಿಕೆಯಾಗದೇ ವಾಸವಾಗಿದ್ದ ವೃದ್ದೆಯ ಕುಟುಂಬದವರನ್ನು ಹಾಗೂ ಸಾಮಗ್ರಿಗಳನ್ನು ಪುರಸಭೆ ಅಧಿಕಾರಿಗಳು ಬೀದಿಗೆ ತಳ್ಳುವ ಮೂಲಕ ಅಮಾನವೀಯವಾಗಿ ನಡೆದುಕೊಂಡ ಘಟನೆ ಪಟ್ಟಣದ ಗಂಜಿಗಟ್ಟಿ ರಸ್ತೆಯ ಆಶ್ರಯ ಕಾಲನಿಯಲ್ಲಿ ಭಾನುವಾರ ನಡೆದಿದೆ.
ಶಾಂತವ್ವ ಗಡ್ಡಿ ಎಂಬ ಮಹಿಳೆ ಸೇರಿದಂತೆ ಹಲವು ಕುಟುಂಬದವರು ಜಿ ಪ್ಲಸ್ 1 ಮನೆಗಳಿಗೆ ತೆರಳಿದ್ದರು. ಶಾಂತವ್ವ ಮನೆ ನಂಬರ್ 94ರಲ್ಲಿ ಉಳಿದುಕೊಂಡಿದ್ದರು. ಹಕ್ಕುಪತ್ರ ನೀಡುವವರೆಗೆ ವಾಪಸ್ ಹೋಗಿ ಎಂದು ಪುರಸಭೆ ನಿಡಿದ್ದ ಸೂಚನೆ ಮೇರೆಗೆ ಹಲವರು ವಾಪಸ್ ಹೋಗಿದ್ದರು.
ಬೇರೆ ಮನೆ ವ್ಯವಸ್ಥೆ ಇಲ್ಲದ ಕಾರಣ ಶಾಂತವ್ವ ಕುಟುಂಬಸ್ಥರು ಇಲ್ಲೇ ಉಳಿದಿದ್ದರು. ಸ್ಥಳಕ್ಕೆ ಬಂದ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ದಬ್ಬಾಳಿಕೆ ನಡೆಸಿ, ದರ್ಪ ತೋರಿ ವಸ್ತುಗಳನ್ನು ಹೊರಗೆ ಎಸೆದಿದ್ದಾರೆ. ಪರಿಪರಿಯಾಗಿ ಬೇಡಿಕೊಂಡರೂ ಕಾಲಾವಕಾಶ ನೀಡಲಿಲ್ಲ. ಏಕಾಏಕಿ ನಿರ್ಮಿತಿ ಕೇಂದ್ರ ಹಾಗೂ ಪೊಲೀಸರೊಂದಿಗೆ ಬಂದು ಮನೆ ಖಾಲಿ ಮಾಡಿಸಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೆ. ವಯೋವೃದ್ದೆ ತಾಯಿ ನೀಲವ್ವ, ರೇಣವ್ವ, ಪುತ್ರಿ ಎಲ್ಲರೂ ಶ್ರಯ ಇಲ್ಲದೇ ರಾತ್ರಿ ಚಳಿಯಲ್ಲೇ ನಡುಗುವಂತಾಯಿತು ಎಂದು ಶಾಂತವ್ವ ಕಣ್ಣೀರಿಟ್ಟಿದ್ದಾರೆ.
ಘಟನೆ ಹಿನ್ನಲೆ ಏನು?
ಶಿಗ್ಗಾಂವಿ ಪಟ್ಟಣದ ಗಂಜಿಗಟ್ಟಿ ರಸ್ತೆಯಲ್ಲಿರುವ ಜಿ ಪ್ಲಸ್ 1 ಮನೆಗಳು ಇನ್ನೂ ಉದ್ಘಾಟನೆಯಾಗಿಲ್ಲ. ಪುರಸಭೆಯ ವ್ಯಾಪ್ತಿಯಲ್ಲಿ ಇಲ್ಲ. ನಿರ್ಮಿತಿ ಕೇಂದ್ರದ ಅಧೀನದಲ್ಲಿದೆ. ಶಿಗ್ಗಾಂವಿ ಪುರಸಭೆಯಿಂದ ಜಿ ಪ್ಲಸ್ 1 ಯೋಜನೆಯಡಿ ಮನೆ ಮಂಜೂರು ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. 184ರಲ್ಲಿ 24 ಮನೆ ಹಂಚಿಕೆಯಾಗಿವೆ, 164 ಬಾಕಿ ಇವೆ. ಹಕ್ಕುಪತ್ರ ಪಡೆಯದೇ ಬೀಗ ಮುರಿದು ಅಕ್ರಮವಾಗಿ ಕೆಲವರು ವಾಸವಾಗಿದ್ದರು. ಅಂಥವರನ್ನು ಭಾನುವಾರ ವಾಪಸ್ ಕಳುಹಿಸಲಾಗಿತ್ತು. ಶಾಂತವ್ವ ಕುಟುಂಬ ಆಶ್ರಯ ಇಲ್ಲದ ಕಾರಣ ಇಲ್ಲೇ ಉಳಿದಿತ್ತು. ಇವರಿಗೆ ಕಾಲಾವಕಾಶ ಕೊಟ್ಟರೆ ಉಳಿದವರಿಗೂ ಕೊಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂಬ ಆರೋಪವಿದೆ.
ಕೋಟ್:
ದಬ್ಬಾಳಿಕೆ ಮಾಡಿಲ್ಲ. ಬೀಗ ಒಡೆದು ಅಕ್ರಮವಾಗಿ ವಾಸವಾಗಿದ್ದವರನ್ನು ಕಳುಹಿಸಲಾಗಿದೆ. ಹಲವು ಬಾರಿ ಸೂಚಿಸಿದ್ದರೂ ಶಾಂತವ್ವ ಖಾಲಿ ಮಾಡಿರಲಿಲ್ಲ. ಶಾಸಕರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ ಫಲಾನುಭವಿಗಳ ಆಯ್ಕೆಯಾದವರಿಗೆ ಹಕ್ಕುಪತ್ರ ನೀಡಿ, ಹಂಚಿಕೆ ಮಾಡಲಾಗುವುದು.
ಮಲ್ಲೇಶ ಆರ್, ಪುರಸಭೆ ಮುಖ್ಯಾಧಿಕಾರಿ