More

  ಮೂರುವರೆ ಟನ್ ಹಾಲಿನ ಪುಡಿ ಅಕ್ರಮ ದಾಸ್ತಾನು; ಶಾಲಾ ಮಕ್ಕಳಿಗೆ ಪೂರೈಸಬೇಕಿದ್ದ ಪೌಡರ್; ಸವಣೂರಿನ ಗುತ್ತಿಗೆದಾರನ ಮನೆಯ ಶೆಡ್‌ನಲ್ಲಿ ಸಂಗ್ರಹ

  ಹಾವೇರಿ: ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ಹಾಲಿನಪುಡಿ ಸರಬರಾಜು ಮಾಡುವ ಯೋಜನೆಯಲ್ಲಿ ಮಕ್ಕಳಿಗೆ ಪೂರೈಸಬೇಕಿದ್ದ 3,575 ಕೆಜಿ (ಮೂರುವರೆ ಟನ್) ಹಾಲಿನ ಪುಡಿಯನ್ನು ಸವಣೂರ ತಾಲೂಕಿನ ಡೊಂಬರಮತ್ತೂರ ಗ್ರಾಮದ ಗುತ್ತಿಗೆದಾರನೊಬ್ಬನ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
  ಹಾವೇರಿ ಜಿಲ್ಲೆಯಲ್ಲಿ ಹಾಲಿನ ಪುಡಿ ಮಾರಾಟ ಮಾಡುವ ಗುತ್ತಿಗೆ ಪಡೆದಿದ್ದ ಡೊಂಬರಮತ್ತೂರ ಗ್ರಾಮದ ಬಸವರಡ್ಡಿ ಎಂಬುವರ ಮನೆಯ ಶೆಡ್‌ನಲ್ಲಿ ಗುತ್ತಿಗೆದಾರ ಅಕ್ರಮವಾಗಿ ಹಾಲಿನ ಪುಡಿ ಸಂಗ್ರಹಿಸಿ ಇಟ್ಟಿದ್ದ. ಶುಕ್ರವಾರ ಬೆಳಗ್ಗೆ ಮಿನಿ ಲಾರಿಯಲ್ಲಿ ಹಾಲಿನ ಪುಡಿ ತುಂಬಿಕೊಂಡು ಎಲ್ಲಿಗೋ ಹೊರಟಿದ್ದಾಗ ಎದುರಿಗೆ ಬರುತ್ತಿದ್ದ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ಗಾಯಗೊಂಡು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ವಿಷಯ ಬಹಿರಂಗವಾಗಿದೆ.
  ಕೂಡಲೇ ಎಚ್ಚೆತ್ತ ಗುತ್ತಿಗೆದಾರ ಶುಕ್ರವಾರ ಮಧ್ಯಾಹ್ನವೇ ಹಾವೇರಿ ತಾಲೂಕಿನ ಜಂಗಮನಕೊಪ್ಪದಲ್ಲಿರುವ ಹಾವೇರಿ ಹಾಲು ಒಕ್ಕೂಟದ ಯುಎಚ್‌ಟಿ ಘಟಕಕ್ಕೆ ವಾಹನ ತೆಗೆದುಕೊಂಡು ಹೋಗಿದ್ದಾರೆ. ಯೋಗ ದಿನಾಚರಣೆ ರಜೆ ಇದ್ದ ಕಾರಣ ಸಂಗ್ರಹಿಸಿ ಇಟ್ಟುಕೊಂಡಿದ್ದು, ಘಟಕದಲ್ಲಿ ಇರಿಸಲಾಗುವುದು ಎಂದಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ವಾಹನ ತಡೆದಿದ್ದಾರೆ. ಸ್ಥಳಕ್ಕೆ ಹಾವೇರಿ ಹಾಲು ಒಕ್ಕೂಟದ ಎಂಡಿ ಡಿ.ಟಿ.ಕಳಸದ, ಹಾವೇರಿ ತಹಸೀಲ್ದಾರ್ ಜಿ.ಶಂಕರ ಹಾಗೂ ಇತರರು ಆಗಮಿಸಿ ಪರಿಶೀಲಿಸಿದ್ದಾರೆ. ಶುಕ್ರವಾರ ರಾತ್ರಿವರೆಗೂ ಈ ಬಗ್ಗೆ ನಿರ್ಧರಿಸಿಲ್ಲ. ಹಾಲಿನ ಪುಡಿ ಧಾರವಾಡದ ಕೆಎಂಎಫ್‌ಗೆ ಸೇರಿದ್ದು ಎಂದು ಖಚಿತಪಡಿಸಿಕೊಂಡಿದ್ದಾರೆ. ಮರುದಿನ ಶನಿವಾರ ಸಂಜೆ ವೇಳೆಗೆ ಧಾರವಾಡ ಕೆಎಂಎಫ್ ಅಧಿಕಾರಿಗಳಿಗೆ ವಾಹನ ಒಪ್ಪಿಸಿದ್ದಾರೆ.
  ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಹಾಲಿನ ಪುಡಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ದಂಧೆ ನಡೆದಿದೆ. ಇದರ ಹಿಂದೆ ಕೆಎಂಎಫ್‌ನ ಕೆಲ ಅಧಿಕಾರಿಗಳ ಕೈವಾಡವೂ ಇದೆ ಎಂಬ ಆರೋಪವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ.
  ಕೂಲಂಕಶ ತನಿಖೆ ಆಗಲಿ
  ಕೆಎಂಎಫ್‌ನಿಂದ ಸರಬರಾಜು ಮಾಡಲಾದ ಹಾಲಿನ ಪುಡಿಯನ್ನು ನೇರವಾಗಿ ಶಾಲೆಗಳಿಗೆ ಪೂರೈಕೆ ಮಾಡಬೇಕು. ಮನೆ, ಗೋಡೌನ್, ಸೇರಿ ಎಲ್ಲಿಯೂ ಸಂಗ್ರಹಿಸಿ ಇಡಬಾರದು ಎಂಬ ನಿಯಮವಿದೆ. ಶಾಲೆಗಳಿಗೆ ರಜೆ ಇದೆ ಎಂಬುದು ಗೊತ್ತಿದ್ದರೂ ಹೇಗೆ ಆ ಸಂದರ್ಭದಲ್ಲಿ ಇಂಡೆಂಟ್ ಪಡೆದರು, ಮನೆಯ ಶೆಡ್‌ನಲ್ಲಿ ಅಕ್ರಮವಾಗಿ ಏಕೆ ಸಂಗ್ರಹಿಸಿಟ್ಟರು, ಯಾರ ಹೆಸರಲ್ಲಿ ಇಂಡೆಂಟ್ ಹಾಕಲಾಗಿತ್ತು ಎಂಬ ಕುರಿತು ಧಾರವಾಡ ಹಾಲು ಒಕ್ಕೂಟ ಕೂಲಂಕಶವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿದೆ.

  See also  ಕೆ.ವಿ.ಅಮರನಾಥರನ್ನು ಎಂಎಲ್‌ಸಿ ಮಾಡಿ; ಜಿಲ್ಲಾ ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಮಡಿವಾಳರ ಒತ್ತಾಯ

  ಕೋಟ್:
  ಸವಣೂರ ತಾಲೂಕಿನ ಡೊಂಬರಮತ್ತೂರ ಗ್ರಾಮದ ಮನೆಯಲ್ಲಿ ಪತ್ತೆಯಾದ ಹಾಲಿನ ಪುಡಿ ಹಾವೇರಿ ಹಾಲು ಒಕ್ಕೂಟಕ್ಕೆ ಸಂಬಂಧಿಸಿದ್ದಲ್ಲ. ಧಾರವಾಡ ಕೆಎಂಎಫ್‌ಗೆ ಸೇರಿದ್ದು. ಅಲ್ಲಿಂದಲೇ ಇಂಡೆಂಟ್ ಪಡೆದು ಗದಗ, ಶಿರಹಟ್ಟಿ ತಾಲೂಕಿಗೆ ಸರಬರಾಜು ಮಾಡಬೇಕಿತ್ತು. ಹಾಗಾಗಿ, ಅದನ್ನು ಧಾರವಾಡ ಹಾಲು ಒಕ್ಕೂಟಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಅವರೇ ಪರಿಶೀಲಿಸಿ, ಮುಂದಿನ ಕ್ರಮ ಜರುಗಿಸಬೇಕಿದೆ.
  – ರಘುನಂದನ ಮೂರ್ತಿ, ಜಿಲ್ಲಾಧಿಕಾರಿ, ಹಾವೇರಿ

  ಕೋಟ್:
  ಸವಣೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಹಾಲಿನ ಪುಡಿ ಯಾರಿಗೆ ಸೇರಿದ್ದು, ಮನೆಯಲ್ಲಿ ಯಾಕೆ ಸಂಗ್ರಹಿಸಿ ಇಟ್ಟಿದ್ದರು ಎಂಬ ಕುರಿತು ಪರಿಶೀಲಿಸಲಾಗುತ್ತಿದೆ. ಸ್ಥಳಕ್ಕೆ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ.
  – ಶಂಕರ ಮುಗದ, ಅಧ್ಯಕ್ಷ, ಧಾರವಾಡ ಹಾಲು ಒಕ್ಕೂಟ

  ಕೋಟ್:
  ಶಾಲಾ ಮಕ್ಕಳಿಗೆ ಸರಬರಾಜು ಮಾಡುವ ಹಾಲಿನ ಪುಡಿಯನ್ನು ಮಾರಾಟ ಮಾಡುವ ದೊಡ್ಡ ದಂಧೆ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಇದಕ್ಕೆ ಹಾಲು ಒಕ್ಕೂಟದ ಹಲವು ಅಧಿಕಾರಿಗಳ ಸಹಕಾರವೂ ಇದೆ. ಈ ಬಗ್ಗೆ ಸಮಗ್ರವಾದ, ನಿಸ್ಪಕ್ಷಪಾತವಾದ ತನಿಖೆ ಆಗಬೇಕು.
  – ರಾಜಶೇಖರ ಬಳ್ಳಾರಿ, ಗ್ರಾಪಂ ಸದಸ್ಯ, ಡೊಂಬರಮತ್ತೂರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts