ಸಂಗೂರ ಜಿಎಂ ಶುಗರ್ ಫ್ಯಾಕ್ಟರಿಗೆ ಬೀಗ; ಕಬ್ಬಿನ ಬಾಕಿ 2.32 ಕೋಟಿ ಬಿಡುಗಡೆಗೆ ರೈತರ ಆಗ್ರಹ

6 HVR 8
Published on

ಹಾವೇರಿ: ರೈತರ 2.32 ಕೋಟಿ ರೂ. ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶುಕ್ರವಾರ ತಾಲೂಕಿನ ಸಂಗೂರ ಗ್ರಾಮದ ಜಿಎಂ ಶುಗರ್ಸ್‌ ಕಂಪನಿಗೆ ರೈತರು ಬೀಗ ಜಡಿದು ಪ್ರತಿಭಟಿಸಿದರು.

ಕಳೆದ ವರ್ಷದ ಹಂಗಾಮಿನಲ್ಲಿ 2 ಲಕ್ಷ ಟನ್ ಕಬ್ಬು ಅರೆದಿರುವ ಕಂಪನಿಯವರು ಸರ್ಕಾರದ ಆದೇಶದಂತೆ ಪ್ರತಿ ಟನ್‌ಗೆ 3,151 ರೂ. ಕೊಡಬೇಕಿತ್ತು. ಅದರ ಬದಲು 3,035 ರೂ. ಮಾತ್ರ ಕೊಟ್ಟಿದ್ದಾರೆ. ಕಬ್ಬು ಸಾಗಿಸಿ ಆರು ತಿಂಗಳಾದರೂ ಬಾಕಿ 116 ರೂ. ಬಿಡುಗಡೆ ಮಾಡಿಲ್ಲ.

ಈ ಬಗ್ಗೆ ಕೇಳಲು ರೈತರು ಫ್ಯಾಕ್ಟರಿ ಬಳಿ ಹೋದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ. ಆಹಾರ ಇಲಾಖೆ ಉಪನಿರ್ದೇಶಕರಿಗೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಫ್ಯಾಕ್ಟರಿಯ ಒಳಗೆ ಗೋದಾಮಿನಿಂದ ಸಕ್ಕರೆ ತುಂಬಿಕೊಂಡು ಹೊರಟಿದ್ದ 20ಕ್ಕೂ ಅಧಿಕ ಲಾರಿಗಳನ್ನು ತಡೆದರು. ಮೂರೂ ಗೇಟ್‌ಗಳಿಗೆ ಬೀಗ ಜಡಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಕಾರ್ಖಾನೆ ಗುತ್ತಿಗೆದಾರರು ರೈತರೊಂದಿಗೆ ಸಭೆಯನ್ನೂ ಮಾಡದೇ ಹಣ ಬಿಡುಗಡೆಗೆ ಸತಾಯಿಸುತ್ತಿದ್ದಾರೆ. ಮುಂಗಾರು ಬಿತ್ತನೆ ಶುರುವಾಗಿದ್ದು ರೈತರು ಬೀಜ, ಗೊಬ್ಬರಕ್ಕೆ ಹಣ ಇಲ್ಲದೇ ಪರದಾಡುವಂತಾಗಿದೆ. ನಮ್ಮ ರೈತರಿಗೆ ಬಾಕಿ ಹಣ ಪಾವತಿಸುವವರೆಗೂ ಫ್ಯಾಕ್ಟರಿಯಿಂದ ಸಕ್ಕರೆ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಬ್ಬು ಬೆಳೆಗಾರರಾದ ರಾಜಶೇಖರ ಬೆಟಗೇರಿ, ಫಕ್ಕೀರಪ್ಪ ಕುರುಬರ, ಮಂಜುನಾಥ ಅಸುಂಡಿ, ನಾಗೇಂದ್ರಪ್ಪ ಕೆಂಗೊಂಡ ಶಂಕರಗೌಡ ಪಾಟೀಲ ಬಸವರಾಜ ಕೆಂಗೊಂಡ ಮಹೇಶ ಪಾಟೀಲ, ವೀರೇಶ ಸೋಮಕ್ಕನವರ, ಶಂಕರಗೌಡ ಪಾಟೀಲ, ಸೋಮಣ್ಣ ಹಾವೇರಿ, ರಾಜು ಹೊನ್ನತ್ತಿ, ಕೊಡೆಪ್ಪ ಸಿಂಗಾಪುರ, ನಾಗರಾಜ ಹೊನ್ನತ್ತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net