ಸಚಿವ ಆರ್.ಬಿ. ತಿಮ್ಮಾಪುರ ಭಾವಚಿತ್ರಕ್ಕೆ ಬೆಂಕಿ; ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

23 HVR 2 B
Published on

ಹಾವೇರಿ: ಆಲಮಟ್ಟಿ ಜಲಾಶಯದ ನೀರಾವರಿ ಎಂಡಿ ಕಚೇರಿಯಲ್ಲಿ ರೈತರನ್ನು ಗೇಟಿನಿಂದ ಹೊರ ಹಾಕಿ ಸಭೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು, ಸಚಿವರ ವಿರುದ್ಧ ಘೋಷಣೆ ಕೋಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ನೀತಿ ಅನುಸರಿಸಿದ ಸಚಿವರನ್ನು ಆ.28ರೊಳಗಾಗಿ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಗಡವು ನೀಡಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಎಂಟು ವರ್ಷಗಳಿಂದ ಪ್ರತಿ ವರ್ಷ ಆಲಮಟ್ಟಿ ಜಲಾಶಯದಿಂದ ನೀರು ಬಿಡುವುದು ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳನ್ನು ಕರೆದು ಸಭೆ ನಡೆಸುವ ವಾಡಿಕೆ ಇದೆ. ಆದರೂ ರೈತರನ್ನು ಹೊರಗಿಟ್ಟು ಸಚಿವರು ಸಭೆ ನಡೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ರೈತ ಸಂಘದ ಅಧ್ಯಕ್ಷ ವಾಸುದೇವ ಮೇಟಿ ಹಾಗೂ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗೇಟಿನಿಂದ ಹೊರಗೆ ಹಾಕಿದ್ದಾರೆ. ಎಂಟು ಜನ ಅಧಿಕಾರೇತರ ಸದಸ್ಯರನ್ನು ಸಮಿತಿಗೆ ನೇಮಿಸಬೇಕು ಎಂಬ ನಿಯಮವಿದ್ದರೂ ಯಾರನ್ನೂ ನೇಮಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಲಮಾಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಚಂದ್ರಪ್ಪ ಮಾನೇರ, ಹನುಮಂತಪ್ಪ ಕರೆಣ್ಣವರ, ನಿಸ್ಸೀಮೆಪ್ಪ ಗಾಣಗೇರ, ಕುಸುಮಾ ಆಸಾದಿ, ಮಲ್ಲಮ್ಮ ಹಿರೇಕೆರೂರ, ಕಾವ್ಯಾ ಬತ್ತಿಕೊಪ್ಪ, ಶಾರದಾ ಮೇಗಳಮನಿ, ಇತರರಿದ್ದರು.
ಮಾತಿನ ಚಕಮಕಿ :
ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ವಿಚಾರವಾಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಕೊನೆಗೂ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net