

ಹಾವೇರಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಯಾಕೆ ಹೆಚ್ಚಾಗುತ್ತಿವೆ ಎಂಬ ಕುರಿತು ರಾಜ್ಯ ಸರ್ಕಾರ ವಿಸ್ತೃತ ಅಧ್ಯಯನ ನಡೆಸಬೇಕು. ದಬ್ಬಾಳಿಕೆ ಮಾಡಿ ರೈತರ ಸಾಲ ವಸೂಲಿಗೆ ನಿಲ್ಲುವ ಬ್ಯಾಂಕ್, ಫೈನಾನ್ಸ್‌ಗಳಿಗೆ ರಾಜ್ಯ ಸರ್ಕಾರ, ಆರ್‌ಬಿಐ ಕಡಿವಾಣ ಹಾಕಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬಕ್ಕೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಬೇಕು. ದಬ್ಬಾಳಿಕೆ ನಡೆಸ ನೋಟಿಸ್ ನೀಡಿ ಸಾಲ ವಸೂಲಿ ಮಾಡದಂತೆ ಬ್ಯಾಂಕ್, ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು. ಕೆಲ ಮೈಕ್ರೋ ಫೈನಾನ್ಸ್‌ಗಳು ನಿಯಮ ಮೀರಿ ವಾರ್ಷಿಕ ಶೇ.35ರವರೆಗೆ ಬಡ್ಡಿ ವಸೂಲಿ ಮಾಡುತ್ತಿರುವುದನ್ನು ತಡೆಯಬೇಕು. ಕೃಷಿ ಸಾಲವನ್ನು ಸಿಬಿಲ್ಗೆ ಸೇರಿಸಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾವೇರಿ, ಬ್ಯಾಡಗಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರು ಪಾಲ್ಗೊಂಡು, ಪರಿಹಾರಕ್ಕಾಗಿ ಒತ್ತಾಯಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ಗೌರವಾಧ್ಯಕ್ಷ ಶಿವಬಸಪ್ಪ ಗೋವಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನೀತ, ಇತರರಿದ್ದರು.