ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಅನ್ಯಾಯ ಆಗಿದೆ; ಸಂಸದರಿಂದ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಆಗಿಲ್ಲ; ಡಾ.ಆರ್.ಎಂ.ಕುಬೇರಪ್ಪ ಆರೋಪ

Kuberapp
Published on

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಮೂರು ಬಾರಿ ಆಯ್ಕೆಯಾಗಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಒಂದು ಕೈಗಾರಿಕೆಯನ್ನೂ ತರಲಿಲ್ಲ. ಈ ಮೂಲಕ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಆರ್.ಎಂ.ಕುಬೇರಪ್ಪ ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಕೈಗಾರಿಕೆಗಳ ಅವಶ್ಯಕತೆ ಇದೆ. ಬಿಇ, ಉನ್ನತ ಶಿಕ್ಷಣ ಕಲಿತ ಅನೇಕ ಯುವಕರು ಆಟೋ ಓಡಿಸಿ ಜೀವ ಸಾಗಿಸುತ್ತಿದ್ದಾರೆ. ರೈತ ಪ್ರಧಾನವಾದ ಹಾವೇರಿ, ಗದಗ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಹಲವೆಡೆ ಕುಡಿಯುವ ನೀರು ಸರಿಯಾಗಿ ಪೂರೈಸಲು ಆಗುತ್ತಿಲ್ಲ ಎಂದರು.
ಇದೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆ ನಾನು 40 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾಲ್ಕು ಬಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಪದವೀಧರರ ಹಾಗೂ ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನದೇ ಆದ ದೊಡ್ಡ ತಂಡ ನನ್ನ ಜತೆಗಿದೆ. ಶಿಕ್ಷಕರು, ಬೆಂಬಲಿಗರ ಒತ್ತಾಸೆ ಮೇರೆಗೆ ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಇಚ್ಛಿಸಿದ್ದೇನೆ. ಇಲ್ಲಿನ ಜನರ ಸಮಸ್ಯೆಗಳ ಅರಿವು ನನಗಿದೆ. ಸಮಗ್ರ ಅಭಿವೃದ್ಧಿಗಾಗಿ ಒಂದಷ್ಟು ಕನಸು ಕಂಡಿದ್ದೇನೆ. ಕ್ಷೇತ್ರದ ಎಲ್ಲ ಶಾಸಕರೊಂದಿಗೂ ಆತ್ಮೀಯತೆ ಹೊಂದಿದ್ದು, ಪಕ್ಷದ ವರಿಷ್ಠರು ಒಂದು ಬಾರಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲ ಆರ್.ಎಸ್.ಪಾಟೀಲ, ಕಾಂಗ್ರೆಸ್ ಮುಖಂಡ ಗೋಪಾಲ ರಡ್ಡಿ, ಹನುಮಂತಗೌಡ ಕಲ್ಮನಿ, ಪ್ರೊ.ಎಚ್.ಎಚ್. ಮುಲ್ಲಾ, ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net