ವಿಜಯವಾಣಿ ವರದಿ ಪ್ರಸ್ತಾಪ, ನಕಲಿ ಪಡಿತರ ಚೀಟಿ ಪತ್ತೆಗೆ ಸೂಚನೆ; ಸಂಸದ ಬಸವರಾಜ ಬೊಮ್ಮಾಯಿ

26 HVR 2
Published on

ಹಾವೇರಿ: ಜಿಲ್ಲೆಯಲ್ಲಿ ನಕಲಿ ಪಡಿತರ ಚೀಟಿಗಳ ಹಾವಳಿ ಹೆಚ್ಚಾಗಿದ್ದು, 5ರಿಂದ 10 ಸಾವಿರ ರೂ. ಪಡೆದು ಅಕ್ರಮವಾಗಿ ಕಾರ್ಡ್ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ನಿಗಾವಹಿಸಬೇಕು ಎಂದು ಬಸವರಾಜ ಬೊಮ್ಮಾಯಿ ಅಕ್ರಮ ಪಡಿತರ ಚೀಟಿ ದಂಧೆ ಕುರಿತು ‘ವಿಜಯವಾಣಿ’ ಪ್ರಕಟಿಸಿದ್ದ ವರದಿ ಪ್ರಸ್ತಾಪಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ದಿಶಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅರ್ಹರಿಗೆ ಮಾತ್ರ ಬಿಪಿಎಲ್ ಪಡಿತರ ಚೀಟಿ ನೀಡಬೇಕು. ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ತುರ್ತು ಸೇವೆಗೆ ವೈದ್ಯಕೀಯ ಪ್ರಮಾಣಪತ್ರ ನೀಡುವಾಗ ಲಂಚ ಪಡೆಯುತ್ತಿರುವ ದೂರುಗಳು ಬಂದಿವೆ. ಹಾಗಾಗಿ, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಅರ್ಹರಿಗೆ ಮಾತ್ರ ನೀಡಬೇಕು ಎಂದು ಆಹಾರ ಇಲಾಖೆ ಉಪನಿರ್ದೇಶಕ ರಮೇಶ ಎಂ.ಎಸ್. ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿ 46,614 ಎಎವೈ ಹಾಗೂ 3,50,953 ಬಿಪಿಎಲ್ ಸೇರಿ 3,97,567 ಪಡಿತ ಚೀಟಿಗಳಿದ್ದು, ಈ ಪೈಕಿ 23,906 ಅರ್ಹ ಫಲಾನುಭವಿಗಳ ಪಡಿತರ ಚೀಟಿ ಪಟ್ಟಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ರಮೇಶ ಎಂ.ಎಸ್. ವಿವರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಜಿಂದಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net