

Haveri bus driver : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ (KSRTC Bus ) ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಬಸ್ ನಲ್ಲೇ ಚಾಲಕನೊಬ್ಬ ನಮಾಜ್ ಮಾಡುತ್ತಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.
KSRTC Bus ಚಾಲಕನೊಬ್ಬ ರಸ್ತೆ ಮಧ್ಯದಲ್ಲಿ ಬಸ್ ನಿಲ್ಲಿಸಿ, ಸೀಟಿನಲ್ಲಿ ಕುಳಿತು ನಮಾಜ್ ಮಾಡಿದ ನಂತರ ತೀವ್ರ ವಿವಾದ ಭುಗಿಲೆದ್ದಿತು. ಈ ಅನಿರೀಕ್ಷಿತ ಘಟನೆಯಿಂದಾಗಿ ಪ್ರಯಾಣದಲ್ಲಿದ್ದ ಪ್ರಯಾಣಿಕರು ಅಸಹಾಯಕರಾಗಿ ಕಾಯಬೇಕಾಯಿತು. ನಮಾಜ್ ಮುಗಿಯುವವರೆಗೂ ಚಾಲಕ ಬಸ್ ಸ್ಟಾರ್ಟ್ ಮಾಡದ ಕಾರಣ ಪ್ರಯಾಣಿಕರಲ್ಲಿ ಕೋಪ ಹೆಚ್ಚಾಯಿತು. ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಕೆಲವು ಪ್ರಯಾಣಿಕರು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಅದು ವೈರಲ್ ಆಗಿತ್ತು.
ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೆಲವೊಂದು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದ್ದರೂ ಸಹ ಸಾರ್ವಜನಿಕ ಸೇವೆಯಲ್ಲಿರುವವರು, ಕರ್ತವ್ಯದ ವೇಳೆ ಹೊರತುಪಡಿಸಿ ತಮ್ಮ ತಮ್ಮ ಧರ್ಮವನ್ನು ಪಾಲಿಸಬಹುದಾಗಿರುತ್ತದೆ. ಆದರೆ, ಕರ್ತವ್ಯದ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಬಸ್ ಅನ್ನು ನಿಲ್ಲಿಸಿ, ಬಸ್ನಲ್ಲಿ ಪ್ರಯಾಣಿಕರು ಇದ್ದಾಗ್ಯೂ ಸಹ ನಮಾಜ್ ಮಾಡಿರುವುದು ಆಕ್ಷೇಪಾರ್ಹ. ಈ ವಿಡಿಯೋ ಬಗ್ಗೆ ಕೂಡಲೇ ತನಿಖೆ ನಡೆಸಿ, ಸಂಬಂಧಪಟ್ಟ ಸಿಬ್ಬಂದಿಯು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಸೂಕ್ತ ಶಿಸ್ತಿನ ಕ್ರಮ ಜರುಗಿಸಿ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಎಂದು ಸೂಚನೆ ನೀಡಿದ್ದಾರೆ.