ಕ್ಷತ್ರಿಯರು ನಾಡಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ; ಶಾಸಕ ರುದ್ರಪ್ಪ ಲಮಾಣಿ

30 HVR 7
Published on

ಹಾವೇರಿ: ಕ್ಷತ್ರಿಯ ಸಮಾಜದ ಸಣ್ಣ ಸಣ್ಣ ಸಮುದಾಯದ ನಾಯಕರು ನಾಡಿನಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದು ರಾಜ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ ಎಂದು ಶಾಸಕ ರುದ್ರಪ್ಪ ಲಮಾಣಿ ಬಣ್ಣಿಸಿದರು.
ನಗರದ ಹಾನಗಲ್ಲ ರಸ್ತೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ನೂತನ ಶಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ಷತ್ರಿಯ ಸಮುದಾಯದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ, ಧರ್ಮಸಿಂಗ್, ಡಿ.ದೇವರಾಜ ಅರಸು ಹಾಗೂ ಕ್ಷತ್ರಿಯ ಸಮುದಾಯಗಳ ಸಂಘಟನೆ ಮಾಡಲು ಶ್ರಮಿಸಿದ ಹರಿಖೋಡೆ ಅವರು ನಮ್ಮ ಸಮುದಾಯಗಳ ನಕ್ಷತ್ರಗಳಿದ್ದಂತೆ ಎಂದರು.
ಕ್ಷತ್ರಿಯ ಸಮುದಾಯಗಳು ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣ-ಸಂಘಟನೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕ್ಷತ್ರಿಯ ಒಕ್ಕೂಟಕ್ಕೆ ಶಕ್ತಿ ನೀಡಿ ಬಲಪಡಿಸೋಣ. ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾನು ಸದಾ ಸಿರ್ದ್ಧನಿದ್ದೇನೆ ಎಂದರು.
ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಾನೂ ಕೂಡ ಕ್ಷತ್ರಿಯ ಸಮುದಾಯದಲ್ಲೇ ಬರುತ್ತೇನೆ. ಇತಿಹಾಸ ಅರಿತಾಗ ನಾವು ಕ್ಷತ್ರಿಯರ ಮೌಲ್ಯ, ತಾಗ್ಯ ಹಾಗೂ ಅವರ ಸೇವೆ ಗೊತ್ತಾಗುತ್ತದೆ. ಕ್ಷತ್ರಿಯರರು ವೀರರು, ಶೂರರು ಹಾಗೂ ಹೋರಾಟ ಮನೋಭಾವದವರು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕಾದರೆ ಅದು ನಮ್ಮ ಹಕ್ಕು ಅಂತಾ ತಿಳಿಯಬೇಕು. ನಿಮ್ಮ ಬೇಡಿಕೆಗಳಿಗೆ ಬದ್ಧರಾಗಿ ಕೆಲಸ ಮಾಡುತ್ತೇನೆ ಎಂದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಸ ಹಲಗತ್ತಿ ಮಾತನಾಡಿ, ಕ್ಷತ್ರಿಯ ಒಕ್ಕೂಟದಲ್ಲಿ 38 ಸಮುದಾಯಗಳಿವೆ. ಅಂದಾಜು 1 ಕೋಟಿ 20 ಲಕ್ಷ ಜನಸಂಖ್ಯೆಯನ್ನು ಸಮುದಾಯ ಹೊಂದಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಸರ್ಕಾರಗಳನ್ನೇ ಬದಲಿಸುವ ಶಕ್ತಿ ಹೊಂದಿದ್ದೇವೆ ಎಂದರು.
ಕೆಪಿಸಿಸಿ ಸದಸ್ಯ ಸತೀಶ ಮೆಹರವಾಡೆ, ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ ಜೋರಾಪುರ, ಉಪಾಧ್ಯಕ್ಷ ಅಶೋಕಸಿಂಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಾಬಾಯಿ ಪುನೀತ ಮಾತನಾಡಿದರು. ವಿವಿಧ ಬೇಡಿಕೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.
ಸುಕ್ಷೇತ್ರ ಮೈಲಾರದ ಪ್ರಧಾನ ಅರ್ಚಕ ಶ್ರೀ ಗುರು ವೆಂಕಪಯ್ಯ ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಯುವ ಘಟಕದ ಜಿಲ್ಲಾಧ್ಯಕ್ಷ ಜಯರಾಮ ಮಾಳಪೂರ, ಉಪಾಧ್ಯಕ್ಷ ರಮೇಶ ಮಾಳವದೆ, ಮಹಾವೀರ ಘನಾತೆ, ಚಂದ್ರಶೇಖರ ಜಾಧವ, ಕೃಷ್ಣಪ್ಪ ಬಾಜಿರಾಯರ, ರಾಜು ಗೌಳಿ, ನಿಂಗಪ್ಪ ಆರೇರ, ರವಿ ಕಲಾಲ, ಚನ್ನಪ್ಪ ಕಲಾಲ, ವಿಷ್ಣುಕಾಂತ ಜಾಧವ, ಪ್ರಕಾಶ ಮುಂಜೋಜಿ, ಭಾಗ್ಯಶ್ರೀ ಮೋರೆ, ಶಶಿರೇಖಾ ಮುಂಜೋಜಿ, ಪ್ರಮೋದ ನವಲೆ, ಶಂಕರ ಮೆಹರವಾಡೆ ಸೇರಿದಂತೆ ಜಿಲ್ಲಾ ಹಾಗೂ ವಿವಿಧ ತಾಲೂಕುಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net