ಹಾವೇರಿ ನಗರಕ್ಕೆ ಕಲುಷಿತ ನೀರು ಪೂರೈಕೆ ! ನಗರಸಭೆಗೆ ಅಧಿಕಾರಿಗಳಿಗೆ ಜನತೆ ಹಿಡಿಶಾಪ; ಸಮರ್ಪಕ ಶುದ್ಧೀಕರಣ ಮರೆತ ಆಡಳಿತ

1 HVR 2 B
Published on

ವಿಜಯವಾಣಿ ವಿಶೇಷ ಹಾವೇರಿ

ತುಂಗಭದ್ರಾ ನದಿ ನೀರು ಖಾಲಿಯಾಗಿರುವ ಪರಿಣಾಮ ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ತಾತ್ಕಾಲಿಕವಾಗಿ ಹೆಗ್ಗೇರಿ ಕೆರೆ ನೀರು ಪೂರೈಸಲಾಗುತ್ತಿದೆ. ಈ ನೀರನ್ನು ಸರಿಯಾಗಿ ಶುದ್ಧೀಕರಿಸದೇ ಪೂರೈಸುತ್ತಿದ್ದು, ಕೆಲವೆಡೆ ಚರಂಡಿ ನೀರು ಮಿಶ್ರಿತವಾಗಿ ಪೂರೈಸಲಾಗುತ್ತಿದೆ. ಇದರಿಂದ ನಗರದ ಜನತೆ ಬೆಚ್ಚಿಬಿದ್ದಿದ್ದು, ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಯವರ ಆದೇಶದಂತೆ ಜನರಿಗೆ ಒಂದು ವಾರದಿಂದ ಹೆಗ್ಗೇರಿ ಕೆರೆಯ ನೀರು ಪೂರೈಸಲಾಗುತ್ತಿದೆ. ಒಂದು ವಾರದಿಂದ ನಗರದ ವಿವಿಧ ಬಡಾವಣೆಗಳಲ್ಲಿ ನಗರಸಭೆಯಿಂದ ಹೆಗ್ಗೇರಿ ಕೆರೆಯ ನೀರನ್ನು ಮುನ್ಸಿಪಲ್ ಹೈಸ್ಕೂಲ್ ಬಳಿ ಇರುವ ಕುಡಿಯುವ ನೀರು ಶುದ್ದೀಕರಣ ಘಟಕಕ್ಕೆ ರವಾನಿಸಲಾಗುತ್ತಿದೆ. ಅಲ್ಲಿಂದ ನೀರು ಶುದ್ಧೀಕರಿಸಿ ಕುಡಿಯುವ ನೀರು ಪೂರೈಸುವ ಸಾರ್ವಜನಿಕ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡಬೇಕಿತ್ತು. ಆದರೆ, ಕೆರೆಯ ಕಲುಶಿತ ನೀರನ್ನು ಸರಿಯಾಗಿ ಶುದ್ಧೀಕರಿಸದೇ ಪೂರೈಸಲಾಗುತ್ತಿದೆ. ಹಾಗಾಗಿ, ಕಲುಷಿತ ನೀರು ಬರುತ್ತಿದೆ. ಇದು ಬಳಕೆಗೂ ಯೋಗ್ಯವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗುತ್ತಿರುವ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿರುವ ಈ ಸಂದರ್ಭದಲ್ಲಿ ಹಾವೇರಿ ನಗರಸಭೆಯವರು ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಪೂರೈಸಬೇಕು. ಅನಾಹುತ ಸಂಭವಿಸುವ ಮುನ್ನವೇ ನೀರು ಪೂರೈಕೆಯಲ್ಲಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂಬುದು ಹಾವೇರಿಯ ಜನತೆಯ ಆಗ್ರಹವಾಗಿದೆ.
ಚರಂಡಿ ನೀರು ಮಿಶ್ರಣ :
ಇನ್ನು ಬಸವೇಶ್ವರ ನಗರ ಎ ಬ್ಲಾಕ್ 12ನೇ ಕ್ರಾಸ್‌ನ ಹಲವು ಮನೆಗಳಲ್ಲಿ ನಲ್ಲಿ ನೀರಿನ ಜತೆಗೆ ಚರಂಡಿ ನೀರು ಮಿಶ್ರಣಗೊಂಡು ಬರುತ್ತಿದೆ. ಕಳೆದ 15 ದಿನಗಳಿಂದ ನಗರಸಭೆಯ ಹಳೆಯ ಪೈಪ್‌ಲೈನ್ ಮೂಲಕ ಬಂದಿರುವ ನೀರಿನಲ್ಲಿ ಚರಂಡಿ ನೀರು ಮಿಶ್ರಣಗೊಂಡಿದೆ. ಈ ನಲ್ಲಿ ನೇರವಾಗಿ ಸಂಪ್‌ಗೆ ಸಂಪರ್ಕವಿದೆ. ಕಾರಣ ನಮ್ಮ ಗಮನಕ್ಕೆ ಬಂದಿಲ್ಲ. ನಾವು ಮನೆಯಲ್ಲಿ ಫಿಲ್ಟರ್ ಹೊಂದಿರುವ ಕಾರಣ ಇದೇ ನೀರನ್ನು ಕುಡಿಯಲು ಬಳಸಿದ್ದೆವು. ನೀರು ವಾಸನೆ ಬಂದ ಕಾರಣ ಅನುಮಾನಗೊಂಡು ಸಂಪ್ ಪರಿಶೀಲಿಸಿದಾಗ ಚರಂಡಿ ಮಿಶ್ರಿತ ನೀರು ಇರುವುದು ಗೊತ್ತಾಗಿದೆ. ಒಂದೆರೆಡು ದಿನ ಇಂತಹ ಗಲೀಜು ನೀರು ಕುಡಿದಿದ್ದರಿಂದ ನಮ್ಮ ತಾಯಿಯವರ ಆರೋಗ್ಯ ಹದಗೆಟ್ಟಿದೆ ಎಂದು ಬಸವೇಶ್ವರ ನಗರ ಎ ಬ್ಲಾಕ್ 12ನೇ ಕ್ರಾಸ್ ನಿವಾಸಿ ಮಂಜುನಾಥ ಮತ್ತಿಹಳ್ಳಿ ಆರೋಪಿಸಿದ್ದಾರೆ.
ಕುಡಿಯಲು ಬಳಸಬೇಡಿ
ಹಾವೇರಿ ನಗರದಲ್ಲಿ ಸದ್ಯ ಹೆಗ್ಗೇರಿ ಕೆರೆಯ ನೀರನ್ನು ಪೂರೈಕೆ ಮಾಡುತ್ತಿರುವ ಕಾರಣ ಈ ನೀರನ್ನು ಯಾರೂ ಕುಡಿಯಲು ಬಳಸಬಾರದು. ಸ್ನಾನ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ಇತ್ಯಾದಿ ನಿತ್ಯದ ಬಳಕೆಗೆ ಮಾತ್ರ ಉಪಯೋಗಿಸಿ ಎಂದು ಈಗಾಗಲೇ ಜಿಲ್ಲಾಡಳಿತ ಸೂಚಿಸಿತ್ತು. ಈ ನೀರನ್ನು ಕೆಲವರು ಫಿಲ್ಟರ್ ಮೂಲಕ ಕುಡಿಯುತ್ತಿದ್ದು, ತುಂಗಭದ್ರಾ ನದಿ ನೀರು ಪೂರೈಸುವ ವರೆಗೂ ಮುಂದಿನ ಸೂಚನೆವರೆಗೂ ಕುಡಿಯಲು ಬಳಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವ ಭೀತಿ ಇದೆ.
ಕೋಟ್:

ಹೆಗ್ಗೇರಿ ಕೆರೆಗೆ ಈಗಾಗಲೇ ಹತ್ತಾರು ವರ್ಷಗಳಿಂದ ಪೊಲೀಸ್ ವಸತಿ ಗೃಹಗಳ ಕೊಳಚೆ ನೀರು ಸೇರಿದಂತೆ ಇತರೆ ಕೊಳಚೆ ನೀರು ಸೇರಿಕೊಂಡಿದೆ. ಒಮ್ಮೆಯೂ ಆ ಕೆರೆಯ ಹೂಳು ಎತ್ತಲಾಗಿಲ್ಲ. ಈಗ ಈ ಕಲುಷಿತ ನೀರನ್ನು ಸರಿಯಾಗಿ ಶುದ್ಧೀಕರಿಸದೇ ಜನರಿಗೆ ನೇರವಾಗಿ ಪೂರೈಸುತ್ತಿರುವುದು ದುರಂತವೇ ಸರಿ. ಜಿಲ್ಲಾಧಿಕಾರಿಯವರೇ ನಗರಸಭೆಗೆ ಆಡಳಿತಾಧಿಕಾರಿ ಆಗಿರುವ ಕಾರಣ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಜಲಾಗಾರಕ್ಕೆ ಭೇಟಿ ಕೊಟ್ಟು ನೀರು ಶುದ್ಧೀಕರಣ ವ್ಯವಸ್ಥೆಯನ್ನು ಸರಿಪಡಿಸಬೇಕು.
ಎಂ.ಎಸ್.ಕೋರಿಶೆಟ್ಟರ್, ಜಿಲ್ಲಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net