More

  ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ; ಆ.28ರಿಂದ ಜಿಲ್ಲೆಯಲ್ಲಿ ಆಶಾಕಿರಣ ಅಭಿಯಾನ; ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

  ಹಾವೇರಿ: ಜಿಲ್ಲೆಯಲ್ಲಿ ಆಶಾಕಿರಣ ಯೋಜನೆಯಡಿ ಅಂಧತ್ವ ನಿವಾರಣೆಗಾಗಿ ಸಾಮೂಹಿಕ ಉಚಿತ ಕಣ್ಣಿನ ತಪಾಸಣೆ ಅಭಿಯಾನವನ್ನು ಆ.28ರಿಂದ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
  ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಅಂಧತ್ವ ನಿವಾರಣಾ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಆಶಾಕಿರಣ ಯೋಜನೆಯ ಅನುಷ್ಠಾನ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮನೆ ಮನೆಗೆ ಭೇಟಿಯ ಜತೆಗೆ, ಅಂಗನವಾಡಿ, ಶಾಲಾ- ವಿಶೇಷ ಕ್ಯಾಂಪ್‌ಗಳನ್ನು ನಡೆಸಲು ವ್ಯವಸ್ಥಿತವಾಗಿ ಕಾರ್ಯಯೋಜನೆ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
  ಪ್ರತಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರನ್ನು ಬಳಸಿಕೊಂಡು ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಿ, ಇ-ಚಾರ್ಟ್ ಬಳಸಿ ಕುಟುಂಬದ ಪ್ರತಿ ಸದಸ್ಯರ ಕಣ್ಣಿನ ಪ್ರಾಥಮಿಕ ತಪಾಸಣೆ ನಡೆಸಬೇಕು. ದೃಷ್ಟಿದೋಷದ ನ್ಯೂನ್ಯತೆ ಕಂಡುಬಂದಲ್ಲಿ ಎರಡನೇ ಹಂತದಲ್ಲಿ ಆಶಾ ಮತ್ತು ಪುರುಷ ಆರೋಗ್ಯ ಕಾರ್ಯಕರ್ತರು ಕಣ್ಣಿನ ತಜ್ಞರಿಂದ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಸಂಬಂಧಿಸಿದ ವೈದ್ಯರಿಗೆ ಶಿಫಾರಸ್ ಮಾಡಲಾಗುವುದು. ದೃಷ್ಟಿ ದೋಷ ಕಂಡುಬಂದಲ್ಲಿ ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರ ಚಿಕಿತ್ಸೆ ಅವಶ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ತಿಳಿಸಿದರು.
  ಮಿಷನ್ ಮೋಡ್‌ನಲ್ಲಿ ಸಾಮೂಹಿಕ ಕಣ್ಣು ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಕಣ್ಣಿನ ತಪಾಸಣೆ ಕುರಿತಂತೆ ವ್ಯಾಪಕ ಜಾಗೃತಿ ಮತ್ತು ಪ್ರಚಾರ ಕೈಗೊಳ್ಳಬೇಕು. ಮನೆ ಮನೆಯ ತಪಾಸಣೆಗೆ ಜತೆಗೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಭಾನುವಾರದ ರಜಾ ದಿನಗಳಲ್ಲಿ ವಿಶೇಷ ಕ್ಯಾಂಪ್‌ಗಳನ್ನು ವಾರ್ಡ್‌ವಾರು ಆಯೋಜಿಸಬೇಕು. ಚಾಲಕರ ಸಂಘ, ಪೌರಕಾರ್ಮಿಕರ ಸಂಘ, ಗಾರ್ಮೆಂಟ್ಸ್ ಕಾರ್ಮಿಕರು, ಗ್ರಾಸಿಂ ಇಂಡಸ್ಟ್ರೀ ಕಾರ್ಮಿಕರು ಒಳಗೊಂಡಂತೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ದೃಷ್ಟಿ ದೋಷ ತಪಾಸಣಾ ಕ್ಯಾಂಪ್‌ಗಳನ್ನು ಆಯೋಜಿಸಬೇಕು. ಅಂಗನವಾಡಿ, ಶಾಲೆಗಳು ಹಾಗೂ ಕಾಲೇಜುಗಳಲ್ಲಿ ತಪಾಸಣೆ ನಡೆಸಬೇಕು. ಈ ಕುರಿತು ಪ್ರತ್ಯೇಕ ತಂಡಗಳನ್ನು ರಚಿಸಿ, ಪ್ರತಿಯೊಬ್ಬರೂ ತಪಾಸಣೆಗೆ ಒಳಗಾಗುವಂತೆ ನೋಡಿಕೊಳ್ಳಬೇಕು ಎಂದರು.
  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಕ್ಷಯ ಶ್ರೀಧರ ಮಾತನಾಡಿ, ಜಿಲ್ಲೆಯಲ್ಲಿ ಕಣ್ಣಿನ ತಪಾಸಣಿ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಬೇಕು. ದೃಷ್ಟಿದೋಷ ಇದ್ದವರಿಗೆ ಮುಂದಿನ ಚಿಕಿತ್ಸೆ, ಉಚಿತ ಕನ್ನಡಕ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು. ಕನ್ನಡಕಗಳ ಖರೀದಿ ಕುರಿತಂತೆ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಅಂಗನವಾಡಿ, ಶಾಲಾ ಕಾಲೇಜು ತಪಾಸಣೆ ವೇಳೆ ಆಯಾ ಇಲಾಖೆ ಮುಖ್ಯಸ್ಥರು, ಶಾಲಾ ಮುಖ್ಯಸ್ಥರು ಅಗತ್ಯ ಸಹಕಾರ ನೀಡಬೇಕು ಎಂದರು.
  ರಾಷ್ಟ್ರೀಯ ಅಂಧತ್ವ ನಿವಾರಣೆಯ ನೋಡಲ್ ಅಧಿಕಾರಿ ಡಾ.ವಿರಕ್ತಮಠ ಮಾತನಾಡಿ, ಜಿಲ್ಲೆಯಲ್ಲಿ ಸೊನ್ನೆಯಿಂದ 18 ವರ್ಷ ಹಾಗೂ 40 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣಿ ನಡೆಸಲಾಗುವುದು. ಆ.28ರಿಂದ ಸೆಪ್ಟೆಂಬರ್ 7ರವರೆಗೆ ಮನೆ ಮನೆಗೆ ತೆರಳಿ ಕಣ್ಣಿನ ಪ್ರಾಥಮಿಕ ತಪಾಸಣೆ ನಡೆಸಲಾಗುವುದು. ಎರಡನೇ ಹಂತದ ಸೆ.1ರಿಂದ ಅಕ್ಟೋಬರ್ 31ರವರೆಗೆ ಕಣ್ಣಿನ ಫೀನಿಂಗ್, ಸೆಪ್ಟೆಂಬರ್ 1 ರಿಂದ ಡಿಸೆಂಬರ್‌ವರೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಜರುಗಲಿದೆ. ಡಿಸೆಂಬರ್ 10ರೊಳಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನ್ನಡಕ ರವಾನಿಸಲಾಗುವುದು. ಡಿಸೆಂಬರ್ 15ರಿಂದ 31ರೊಳಗಾಗಿ ಕನ್ನಡಕ ವಿತರಣೆ ಮಾಡಲಾಗುವುದು. 34,558 ಶಾಲಾ ಮಕ್ಕಳಿಗೆ ಹಾಗೂ 82,522 ಇತರರಿಗೆ ಉಚಿತ ಕನ್ನಡ ವಿತರಣೆಗೆ ಮಾಡಲಾಗುವುದು. 4,500 ಜನರಿಗೆ ಸರ್ಕಾರಿ ಸಂಸ್ಥೆಗಳ ಹಾಗೂ 4,500 ಜನರಿಗೆ ವಿವಿಧ ಖಾಸಗಿ ಸಂಸ್ಥೆಗಳಿಂದ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
  ಸಭೆಯಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಚನ್ನಪ್ಪ. ಸವಣೂರ ಉಪವಿಭಾಗಾಧಿಕಾರಿ ಅಹ್ಮದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಉಮೇಶಪ್ಪ, ಡಾ.ಜಗದೀಶ, ಡಾ.ನಿಲೇಶ, ಡಾ.ಚುರ್ಚಿಹಾಳ, ಡಾ.ದೇವರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

  See also  ಕುನೋ ಉದ್ಯಾನವನದಲ್ಲಿ ಹೊಡೆದಾಡಿಕೊಂಡ ನಮಿಬಿಯಾ-ದಕ್ಷಿಣ ಆಫ್ರಿಕಾ ಚೀತಾಗಳು; ಗಾಯಗೊಂಡ 'ಅಗ್ನಿ'

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts