

ಹಾವೇರಿ: ಬರ ನಿರ್ವಹಣೆ ಕಾರ್ಯವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಂಡುಬಂದರೆ ತಕ್ಷಣ ಸ್ಪಂದಿಸಬೇಕು. ತಪ್ಪು ಮಾಡಿದರೆ ಯಾವುದೇ ಇಲಾಖೆಯ ಅಧಿಕಾರಿಗಳಿರಲಿ ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ತಾಲೂಕು ಹಂತದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚನೆಯಾಗಿದೆ. ಈ ಸಮಿತಿ ಕಾಲಕಾಲಕ್ಕೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಳಜಿಯಿಂದ ಕೆಲಸ ಮಾಡಲು ಸಾಧ್ಯವಾಗದ ಅಧಿಕಾರಿಗಳು ವರ್ಗಾವಣೆ ಪಡೆದು ಹೋಗಬಹುದು. ಈ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡುವುದು, ಇಲ್ಲದ ನೆಪಗಳನ್ನು ಹೇಳಿದರೆ ನಾನು ಸಹಿಸುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳ ಮಾಹಿತಿ ಹೊರತುಪಡಿಸಿ, ಗ್ರಾಮ ಹಂತದಲ್ಲಿ ಬರ ಪರಿಸ್ಥಿತಿಯ ನೈಜ ಸ್ಥಿತಿ ಹಾಗೂ ಪರ್ಯಾಯ ಕ್ರಮಗಳ ಕುರಿತಂತೆ ನೆಲಸ್ಥಿತಿಯ ವಾಸ್ತವ ವರದಿ ಸಲ್ಲಿಸುವಂತೆ ಸೂಚಿಸಿದರು.
ಕುಡಿಯುವ ನೀರಿನ ಪೂರೈಕೆ ಕುರಿತಾಗಿ ಪ್ರತಿ ಗ್ರಾಮ ಹಾಗೂ ಪಟ್ಟಣಗಳ ಕುಡಿಯುವ ನೀರಿನ ಪೂರೈಕೆ ಸ್ಥಿತಿಗತಿಗಳ ಕುರಿತಂತೆ ನೈಜ ಮಾಹಿತಿಯನ್ನು ಸಂಗ್ರಹಿಸಿ. ಸದ್ಯ ಇರುವ ಮೂಲಗಳು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾವ ಗ್ರಾಮಗಳು ಹಾಗೂ ಪಟ್ಟಣಗಳ ಮಾಹಿತಿಯನ್ನು ಸಂಗ್ರಹಿಸಿ. ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಪೈಪ್‌ಲೈನ್, ಕೊಳವೆಬಾವಿ, ಓವರ್‌ಹೆಡ್ ಟ್ಯಾಂಕ್‌ಗಳ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿಗಳನ್ನು ಸಂಗ್ರಹಿಸಿ. ಇವುಗಳ ಕಾರ್ಯಕ್ಷಮತೆ, ನಿರುಪಯುಕ್ತ ಹಾಗೂ ದುರಸ್ತಿ ಹಾಗೂ ಪ್ಲಸ್ಸಿಂಗ್ ಮೂಲಕ ಮರು ಬಳಕೆ ಕುರಿತಾಗಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ವಿವರವಾದ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಕೇಂದ್ರ ಸರ್ಕಾರ ಆದೇಶಿಸಿದ ತಕ್ಷಣ ನೂರು ದಿನದಿಂದ ನೂರೈವತ್ತು ದಿನಗಳಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲಾಗುವುದು. ಜ.1ರಿಂದ ಜೂನ್ 30ರವರೆಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲು ಈಗಾಗಲೇ ಗ್ರಾಮವಾರು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪ ವಿಭಾಗಾಧಿಕಾರಿಗಳಾದ ಚನ್ನಪ್ಪ, ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಎಚ್., ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕಾ ಉಪನಿರ್ದೇಶಕ ಪ್ರದೀಪ ಎಲ್., ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್.ವಿ.ಸಂತಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.
ಟ್ಯಾಂಕರ್ ನೀರು ಪೂರೈಕೆ ಬೇಡ
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಕೊಳ್ಳಬೇಕು. ಮಾಲೀಕರೊಂದಿಗೆ ಬಾಡಿಗೆ ಒಪ್ಪಂದ ಮಾಡಿಕೊಂಡು ಈ ಕೊಳವೆಬಾವಿಗಳಿಂದ ನೀರಿನ ಪೂರೈಕೆಗೆ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬಾರದು. ಟ್ಯಾಂಕರ್ ಬಳಕೆ ಕೊನೆಯ ಆಯ್ಕೆಯಾಗಬೇಕು. ಅನಿವಾರ್ಯವಾದರೆ ಟ್ಯಾಂಕರ್ ಬಳಕೆ ಕುರಿತಂತೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಡಿಸಿ ತಿಳಿಸಿದರು.
ಮೇವು ಬ್ಯಾಂಕ್:
ಪ್ರತಿ ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆ, ಮೇವಿನ ದಾಸ್ತಾನು, ಯಾವ ದಿನಗಳಿಂದ ಮೇವಿನ ಕೊರತೆಯಾಗಬಹುದು ಎಂಬ ಮಾಹಿತಿ ಪಡೆಯಿರಿ. ಅನಿವಾರ್ಯ ಎದುರಾದರೆ ಗೋಶಾಲೆ ಹಾಗೂ ಮೇವಿನ ಬ್ಯಾಂಕ್‌ಗಳ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ನೀರಿನ ಮೂಲ ಹೊಂದಿರುವ ರೈತರನ್ನು ಗುರುತಿಸಿ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಿ, ಹಸಿರು ಮೇವು ಬೆಳೆಯಲು ಉತ್ತೇಜಿಸಬೇಕು. ಸಾಧ್ಯವಾದರೆ ಸರ್ಕಾರಿ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದಿಂದಲೇ ಮೇವು ಬೆಳೆಸುವ ಕುರಿತು ಪರಿಶೀಲಿಸಿ. ಕೃತಕ ಮೇವಿನ ಅಭಾವಸೃಷ್ಟಿಸಿ ದಾಸ್ತಾನು ಮಾಡಿಕೊಳ್ಳುವವರ ಮೇಲೆ ನಿಗಾವಹಿಸಿ ಎಂದು ಡಿಸಿ ನಿರ್ದೇಶಿಸಿದರು.