ಮಳೆಯಿಂದ ಬೆಳೆ ರಕ್ಷಣೆಗೆ ರೈತರಿಗೆ ಸಲಹೆ

Published on

ಹಾವೇರಿ: ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದ ರೈತರ ಹೊಲಗಳಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಹೆಚ್ಚಿನ ತೇವಾಂಶ ಉಂಟಾಗಿ ಕೃಷಿ ಬೆಳೆಗಳ ಬೆಳವಣಿಗೆ ಕುಂಠಿತವಾಗಿ ಮೆಕ್ಕೆಜೋಳದಲ್ಲಿ ಕೇದಿಗೆ ರೋಗ ಹಾಗೂ ಸೋಯಾ ಅವರೆಯಲ್ಲಿ ತುಕ್ಕು ರೋಗದ ಲಕ್ಷಣಗಳು ಉಂಟಾಗುವ ಆತಂಕವಿದೆ. ಹೊಲಗಳ ಒಡ್ಡುಗಳಲ್ಲಿ ನಿಂತ ನೀರನ್ನು ಹರಿ ಮಾಡುವುದರ ಮೂಲಕ ಹೊರಹಾಕಲು ಪ್ರಯತ್ನ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದ್ದಾರೆ.
ಈಗಾಗಲೇ ಭೂಮಿಯು ಗರಿಷ್ಟ ಪ್ರಮಾಣದ ತೇವಾಂಶವನ್ನು ಹಿಡಿದಿಟ್ಟುಕೊಂಡಿದ್ದು ಬೇರುಗಳ ಮೂಲಕ ಪೋಷಕಾಂಶಗಳು ಬೆಳೆಗಳಿಗೆ ಲಭ್ಯವಾಗದಿರುವ ಕಾರಣ ಎಲೆಗಳ ಮೂಲಕ ಪೋಷಕಾಂಶಗಳನ್ನು ಒದಗಿಸುವುದು ಸೂಕ್ತವಾಗಿದೆ. ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19-19-19, 00-52-34, 18-18-18, 13-00-45 ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ 5ರಿಂದ 10 ಗ್ರಾಂ ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು. ಮೆಕ್ಕೆಜೋಳದ ಬೆಳೆಗಳು ಹಳದಿಯಾದಲ್ಲಿ ನ್ಯಾನೋ ಯೂರಿಯಾ ಸಿಂಪಡಿಸುವ ಮೂಲಕ ಸಾರಜನಕವನ್ನು ಒದಗಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹತ್ತಿ ಬೆಳೆಯಲ್ಲಿ ಕಪ್ಪು ಹೇನು ಬಾಧೆ ಕಂಡುಬಂದಲ್ಲಿ 3 ಲೀ. ನೀರಿಗೆ ಇಂದು ಮಿ.ಲೀ. ಅಸಿಟಾಮಾಪ್ರಿಡ್ ಅಥವಾ ಪ್ರತಿ ಲೀ.ನೀರಿಗೆ ಒಂದು ಮಿ.ಲೀ. ಇಮಿಡಾಕ್ಲೋಪ್ರಿಡ್ ಬೆರೆಸಿ ಸಿಂಪಡಿಸಬೇಕು. ಎಲೆಗಳು ಕೆಂಪಾದರೆ ನ್ಯಾನೋ ಡಿ.ಎ.ಪಿ. ಸಿಂಪಡಿಸಬಹುದಾಗಿದೆ. ಹದ ಬಂದ ಕೂಡಲೇ ಮೆಕ್ಕೆಜೋಳದ ಬೆಳೆಗಳಿಗೆ ಪ್ರತಿ ಎಕರೆಗೆ 15-20 ಕೆ.ಜಿ. ಯೂರಿಯಾ ಮೇಲುಗೊಬ್ಬರ ಕೊಡಬಹುದು. ಎಡೆಕುಂಟೆ ಹೊಡೆಯಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net