

ಹಾವೇರಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಹನುಮನಮಟ್ಟಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಮೃತ ಮಹಿಳೆಯ ಹೆಸರು ಗಂಗಮ್ಮ (45) ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಬ್ಬು ತುಂಬಿದ ಟ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಮೇಲ್ನೋಟಕ್ಕೆ ಕಾರು ಚಾಲಕನ ಅಜಾಗರೂಕತೆಯೆ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)