

ಹಾಸನ: ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಚಿನ್ನಾಭರಣ ಪಡೆದು ನಾಪತ್ತೆಯಾಗುತ್ತಿದ್ದ ಆರೋಪಿಯನ್ನು ಬಂಧಿಸಿರುವ ಶಾಂತಿಗ್ರಾಮ ಠಾಣೆ ಪೊಲೀಸರು 2.5 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಒಡವೆ ಹಾಗೂ 34 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಕಾಳಮಾರನಹಳ್ಳಿಪುರ ಗ್ರಾಮದ ಕೆ.ಎಸ್. ಮಹೇಶ್ (44) ಬಂಧಿತ ಆರೋಪಿ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿರುವ ಈತ ಹಣದಾಸೆಗಾಗಿ ಮೋಸದ ವೃತ್ತಿಯಲ್ಲಿ ತೊಡಗಿದ್ದ.
ಮಹೇಶ್‌ನ ಮಾತಿಗೆ ಮರುಳಾಗಿ 10 ಗ್ರಾಂ ಚಿನ್ನದ ಸರ ಕೊಟ್ಟಿದ್ದ ಚನ್ನರಾಯಪಟ್ಟಣ ತಾಲೂಕು ತಿಮ್ಲಾಪುರ ಗ್ರಾಮದ ಲತಾ ಎಂಬುವರು ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರ ಬಲೆಗೆ ಮಹೇಶ್ ಬಿದ್ದಿದ್ದಾನೆ. ಜಮೀನಿಗೆ ಹೊರಟಿದ್ದ ಲತಾ ಅವರನ್ನು ತಡೆದಿದ್ದ ಮಹೇಶ್ ಅಪ್ಪೇನಹಳ್ಳಿಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದ. ನಂತರ ಅವರ ಮೊಬೈಲ್ ನಂಬರ್ ಪಡೆದು ಅಲ್ಲಿಂದ ನಿರ್ಗಮಿಸಿದ್ದ. ಮೂರು ದಿನಗಳ ಬಳಿಕ ಕರೆ ಮಾಡಿ ನಿಮಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಲೋನ್ ಕೊಡಿಸುತ್ತೇನೆ ಎಂದು ಹೇಳಿ ಅವರ ಚಿನ್ನದ ಸರದೊಂದಿಗೆ ತೆರಳಿದ್ದ. ನಂತರ ಎಷ್ಟೇ ಸಲ ಫೋನ್ ಮಾಡಿದರೂ ಸ್ವೀಕರಿಸಿದ ಕಾರಣ ನ. 18 ರಂದು ಎಫ್‌ಐಆರ್ ದಾಖಲಿಸಿದ್ದರು.