

ಹಾಸನ: ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೋ - ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಲು ಸಿಎಂ ಯಡಿಯೂರಪ್ಪ ಮಾತ್ರ ಸಮರ್ಥರು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದರು.
ಬೇಲೂರು ತಾಲೂಕಿನ ಹಳೇಬೀಡು ದ್ವಾರ ಸಮುದ್ರ ಕೆರೆ ಪರಿಶೀಲನೆಗೆ ಬಂದಿದ್ದ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುನಿರತ್ನ ಅವರನ್ನು ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಅದನ್ನಷ್ಟೇ ನಾನು ಹೇಳಬಹುದು, ಇನ್ನು ಮುಂದೆ ಏನಾಗುತ್ತದೆ ಎಂದು ನನ್ನನ್ನು ಕೇಳಿದರೆ ಉತ್ತರಿಸುವುದು ಕಷ್ಟ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನ್ನೊಂದಿಗೆ ಯಾರೂ ಮಾತನಾಡಿಲ್ಲ. ಶಿರಾ ಹಾಗೂ ಆರ್.ಆರ್. ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಇಬ್ಬರೂ ನಾಯಕರಾಗಿದ್ದು ಪರಸ್ಪರ ಭೇಟಿಯಾಗುವುದರಲ್ಲಿ ಯಾವ ತಪ್ಪಿದೆ. ಅಭಿವೃದ್ಧಿ ವಿಚಾರವಾಗಿ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಇತಿಹಾಸ ಪ್ರಸಿದ್ಧ ಹಳೇಬೀಡಿನ ದ್ವಾರಸಮುದ್ರ ಕೆರೆ ಏರಿ ದುರಸ್ತಿಗೀಡಾಗಿದ್ದು ನೀರು ಕಡಿಮೆಯಾದ ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
135 ಮೀಟರ್ ಕೆರೆ ಏರಿ ಹಾಳಾಗಿದ್ದು ನೀರು ಭರ್ತಿಯಾಗಿರುವುದರಿಂದ ಕಾಮಗಾರಿ ಕೈಗೊಳ್ಳುವಂತಿಲ್ಲ. ನೀರು ಹೊರ ಬಿಟ್ಟು ಕೆಲಸ ಕೈಗೊಳ್ಳಲು ಸ್ಥಳೀಯರು ಬಿಡುತ್ತಿಲ್ಲ. ನೀರಾವರಿ ಇಲಾಖೆ ಇಂಜಿನಿಯರ್‌ಗಳು ಪರಿಸ್ಥಿತಿಯನ್ನು ಅರಿತಿದ್ದು ಏನು ಮಾಡಬೇಕೆಂಬುದರ ಬಗ್ಗೆ ನಿರ್ಧರಿಸುತ್ತಾರೆ. ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.