

ನವದೆಹಲಿ: ಅಮೆರಿಕ ಮೂಲದ ಬೈಕ್ ತಯಾರಿಕ ಕಂಪನಿ ಹಾರ್ಲೆ ಡೇವಿಡ್ಸನ್ ಭಾರತದಲ್ಲಿನ ತನ್ನ ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿದೆ. ವ್ಯವಹಾರದಲ್ಲಿನ ಮಂದಗತಿ ಮತ್ತು ಮಾರಾಟದಲ್ಲಿ ಭಾರಿ ಇಳಿಕೆಯಾಗುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.
ಆದರೆ, ಭಾರತದ ಸ್ಥಳೀಯ ದ್ವಿಚಕ್ರ ಕಂಪನಿಯ ಪಾಲುದಾರಿಕೆಯೊಂದಿಗೆ ಹಾರ್ಲೆ ಡೇವಿಡ್ಸನ್ ತನ್ನ ಸೇವೆಯನ್ನು ಮುಂದುವರಿಸಲಿದ್ದು, ಈ ಬಗ್ಗೆ ಆದಷ್ಟು ಬೇಗ ಘೋಷಣೆ ಮಾಡಲಿದೆ. ಮೂಲಗಳ ಪ್ರಕಾರ ಹಿರೋ ಮೋಟೋಕಾರ್ಪ್ ಕಂಪನಿ ಜತೆ ಪಾಲುದಾರಿಕೆ ಹೊಂದಲಿದೆ ಎಂದು ಹೇಳಲಾಗಿದೆ.
ಕರೊನಾ ಮಹಾಮಾರಿಗೆ ಇಡೀ ಜಗತ್ತೇ ತಲ್ಲಣಗೊಂಡಿದ್ದು, ಆರ್ಥಿಕ ಸ್ಥಿತಿ ಕುಸಿದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಆರ್ಥಿಕ ಹಿಂಜರಿತಕ್ಕೆ ಹಾರ್ಲೆ ಡೇವಿಡ್ಸನ್ ಕೂಡ ಹೊರತಾಗಿಲ್ಲ. ಮಾರುಕಟ್ಟೆಯಲ್ಲಿ ತನ್ನ ವ್ಯವಹಾರ ಕುಸಿದಿರುವುದರಿಂದ ಈಗಾಗಲೇ ಕೆಲಸಗಾರರನ್ನು ಕಂಪನಿ ವಜಾಗೊಳಿಸಿದೆ.
ಅಂದಹಾಗೆ ಹರಿಯಾಣದ ಬವಾಲದಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿ ಇದೆ. ಜಾಗತಿಕವಾಗಿ ಉದ್ಯೋಗ ಕಡಿತ ಮತ್ತು ಕಂಪನಿಯ ಹೊಸ ಯೋಜನೆ ಸೇರಿದಂತೆ ಅನೇಕ ಕ್ರಮಗಳ ಆಧಾರದ ಮೇಲೆ ಕಂಪನಿಯು ಈ ನಿರ್ಧಾರ ತೆಗೆದುಕೊಂಡಿದೆ ಎಂದು ನೂತನ ಸಿಇಒ ಜೊಚೆನ್ ಇಟ್ಜ್ ತಿಳಿಸಿದ್ದಾರೆ.
ಇನ್ನು ಈಗಾಗಲೇ ಬೈಕ್ ಖರೀದಿ ಮಾಡಿರುವವರಿಗೆ ಕಂಪನಿಯ ಸೇವೆ ಲಭ್ಯವಾಗಲಿದೆ. ಇದರಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿರುವುದಾಗಿ ಕಂಪನಿ ತಿಳಿಸಿದೆ. ಬಿಡಿ ಭಾಗಗಳು ಮತ್ತು ಹೊಸ ಮಾರಾಟ ಸೌಲಭ್ಯಗಳನ್ನು ಸಹ ಒದಗಿಸಲಿದ್ದೇವೆಂದು ಕಂಪನಿ ಹೇಳಿದೆ.
ನಾವು ನಮ್ಮ ವ್ಯವಹಾರ ಮಾದರಿಯನ್ನು ಬದಲಾಯಿಸುತ್ತಿದ್ದೇವೆ ಮತ್ತು ನಮ್ಮ ಉತ್ಪಾದನಾ ಸೌಲಭ್ಯವನ್ನು ಮುಚ್ಚುತ್ತಿದ್ದೇವೆಂದು ಕಂಪನಿಯ ಮೂಲಗಳು ಮಾಹಿತಿ ನೀಡಿವೆ. (ಏಜೆನ್ಸೀಸ್)