ಮಜಾವಾದಿ ಸಿದ್ದರಾಮಯ್ಯ; ಬಿ.ಕೆ.ಹರಿಪ್ರಸಾದ್ ನಿಜವನ್ನೇ ಹೇಳಿದ್ದಾರೆ ಎಂದ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್

MLC ravikumar
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾವಾದಿ. ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ಮಜಾವಾದಿ ಎಂದು ನಿಜವನ್ನೇ ಹೇಳಿದ್ದಾರೆ. ಈ ಮಾತು ಹೇಳಿದರೆ ಏನಾಗುತ್ತದೆ ಎಂದು ಗೊತ್ತಿದ್ದೇ ಹರಿಪ್ರಸಾದ್ ಮಾತಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ಎನ್.ರವಿಕುಮಾರ್ ಕಾಲೆಳೆದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಭ್ರಷ್ಟಾಚಾರದ ಪೋಷಕ. ಕಾಂಗ್ರೆಸ್ ನಲ್ಲಿ ಬಹಳಷ್ಟು ಶಾಸಕರು ಸಿದ್ದರಾಮಯ್ಯ ವಿರುದ್ಧ ಇದ್ದಾರೆ. ಹರಿಪ್ರಸಾದ್ ಗೆ ಹಿಂದಿನಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬೆಂಬಲವೂ ಇದೆ ಎಂದು ಕೆಣಕಿದರು.

ಅಸಹಾಯಕತೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆಯೇ ಅವರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಸಂಘದ ಹಿನ್ನೆಲೆಯಿಂದ ಬಂದವರು, ಸಂಘಟನೆಯಿಂದ ಬೆಳೆದ ವ್ಯಕ್ತಿ ಶೆಟ್ಟರ್. ಅಂತಹವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ, ರಾಹುಲ್ ಗಾಂಧಿಯವರನ್ನು ಹಾಡಿ ಹೊಗಳುತ್ತಾರೆ ಎಂದರೆ ಅದಕ್ಕಿಂತ ದಯನೀಯ ಸ್ಥಿತಿ ಇರಲಾರದು ಎಂದು ಛೇಡಿಸಿದರು.

ಕಾಗೆಗೆ ಒಳ್ಖೆಯ ಗುಣಗಳು !

ಕಲಬುರ್ಗಿಯಲ್ಲಿ ನಟ ಪ್ರಕಾಶ್ ರಾಜ್ ನಿನ್ನೆ ಮಾತನಾಡುವ ವೇಳೆ ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ್ದಾರೆ.. ಕಾಗೆ ಒಳ್ಳೆಯ ಪಕ್ಷಿ, ಎಲ್ಲರನ್ನು ಕರೆದು ಹಂಚಿಕೊಂಡು ತಿನ್ನುವ ಗುಣವನ್ನು ಕಾಗೆಗಳು ಹೊಂದಿವೆ. ಇಂತಹ ಸಾಮಾನ್ಯ ಬುದ್ಧಿಯು ಪ್ರಕಾಶ್ ರಾಜ್ ಅವರಲ್ಲಿಲ್ಲ.

ಪ್ರಕಾಶ್ ರಾಜ್ ಕೆಟ್ಟದ್ದನ್ನೇ ಯೋಚನೆ ಮಾಡುವ ಪ್ರಾಣಿ, ಆ ಪ್ರಾಣಿಯ ಹೆಸರು ನಾನು ಹೇಳುವುದಿಲ್ಲ. ಎಲ್ಲ ಧರ್ಮಗಳಲ್ಲೂ ಕೆಲ ಲೋಪಗಳಿವೆ, ಮನುಷ್ಯರಲ್ಲೂ ಕೊರತೆಗಳಿವೆ. ಆದರೆ ಸದಾ ಕೆಟ್ಟದ್ದನ್ನೇ ಮಾತನಾಡುವ ಪ್ರಾಣಿ ಎಂದರೆ ಅದು, ಪ್ರಕಾಶ್ ರಾಜ್ ಎಂದು ಎನ್.ರವಿಕುಮಾರ್ ಚಾಟಿ ಬೀಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net