ಮಂಗಳೂರು: ಧರ್ಮಪ್ರಸಾರದಲ್ಲಿ ಹರಿಕಥೆಯ ಪಾತ್ರ ಹಿರಿದು. ಅಧ್ಯಾತ್ಮದ ಪ್ರಸಾರದಲ್ಲಿ ದೇಶಾದ್ಯಂತ ಈ ಕ್ಷೇತ್ರ ತನ್ನದೇ ಆದ ಛಾಪು ಮೂಡಿಸಿದೆ ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಮಾನಂದಜೀ ಅಭಿಪ್ರಾಯಪಟ್ಟರು. ಹರಿಕಥಾ ಪರಿಷತ್ ಮಂಗಳೂರು, ರಾಮಕೃಷ್ಣ ಮಠ, ಷಡ್ಜ ಕಲಾಕೇಂದ್ರ ಟ್ರಸ್ಟ್ ಬೆಂಗಳೂರು ಸಂಯುಕ್ತ ಸಹಯೋಗದಲ್ಲಿ ಮಂಗಳೂರು ರಾಮಕೃಷ್ಣ ಮಠದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ಹರಿಕಥಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜನರ ಮನಸ್ಸು, ಹೃದಯದಲ್ಲಿ ಭಗವಂತನ ಕಡೆಗೆ ಪ್ರೇಮವನ್ನು ಹರಿಸುವುದು ಹರಿಕಥೆಯ ಮೂಲ ಉದ್ದೇಶ. ಸಂಘಟಿತ ಪ್ರಯತ್ನದಿಂದ ಹರಿಕಥಾ ಪರಿಷತ್ ಈ ಕ್ಷೇತ್ರದ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದರು.
ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಹಲವು ಹರಿದಾಸರು ಮಂಡಿಸಿದ ಪ್ರಬಂಧಗಳನ್ನು ಒಳಗೊಂಡ ಕೃತಿ ‘ಅರ್ಪಣೆ’ಯನ್ನು ಜಿತಕಾಮಾನಂದಜಿ ಮಹಾರಾಜ್ ಅನಾವರಣಗೊಳಿಸಿದರು.
ಸಮ್ಮೇಳನಾಧ್ಯಕ್ಷ ಕೆ.ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಖಜಾಂಚಿ ಭಾರತಿ ಶೆಟ್ಟಿ ಮಾತನಾಡಿ, ಹರಿಕಥಾ ಶ್ರವಣದಿಂದ ಸಂಸ್ಕಾರಯುತ ಜೀವನ ನಡೆಸಲು ಸಾಧ್ಯ. ಈ ಮಹತ್ವದ ಕಲೆಯನ್ನು ಮಕ್ಕಳಿಗೆ ತಿಳಿ ಹೇಳುವಲ್ಲಿ, ಅವರನ್ನು ಕರೆತರುವಲ್ಲಿ ಹೆತ್ತವರು ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಹರಿಕಥಾ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಹೇಗೆ ಎಂಬ ಬಗ್ಗೆ ಸಮಾಜದಲ್ಲಿ ಚಿಂತನೆ ನಡೆಯಬೇಕಾಗಿದೆ ಎಂದು ಸಮಾರೋಪ ನುಡಿಗಳನ್ನಾಡಿದ, ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಹೇಳಿದರು. ಇಂದಿನ ಯುವ ತಲೆಮಾರಿನ ಆಟ–ಪಾಠಗಳು ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ನಲ್ಲೇ ಕಳೆದುಹೋಗುತ್ತಿದೆ. ಅವರನ್ನು ಅದರಿಂದ ಹೊರತಂದು, ಕಲಾ, ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುವ ಕರ್ತವ್ಯ ಹೆತ್ತವರದು. ಸಾಮಾಜಿಕ ಜಾಲತಾಣದ ಮೂಲಕ ಹರಿಕಥೆಯಂತಹ ಕಲೆಯನ್ನು ಇಂದಿನ ಜನಾಂಗಕ್ಕೆ ತಲುಪಬೇಕಾಗಿದೆ ಎಂದರು.
ಹರಿಕಥಾ ರಂಗಕ್ಕೆ ಬೆಂಬಲ ನೀಡಿದ ಹಲವು ಸಂಘ–ಸಂಸ್ಥೆ, ಧಾರ್ಮಿಕ ಕ್ಷೇತ್ರಗಳನ್ನು ಗೌರವಿಸಲಾಯಿತು. ಹಿರಿಯ ಹರಿದಾಸರು, ಕೀರ್ತನ ಕುಟೀರ ಸಂಸ್ಥೆ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಮಹಾಬಲ ಶೆಟ್ಟಿ ಅವರನ್ನು ಸಮ್ಮೇಳನ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ, ಹರಿಕಥಾ ಸಮ್ಮೇಳನ ಸಮಿತಿ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್, ಸ್ವರ್ಣೋದ್ಯಮಿ ಎಸ್.ರವೀಂದ್ರ ಶೇಟ್ ಉಪಸ್ಥಿತರಿದ್ದರು. ನಾರಾಯಣ ರಾವ್, ದಿನೇಶ್ ಪೈ, ವಿಜಯಲಕ್ಷ್ಮೀ ಶಂನಾಡಿಗ, ಶೇಣಿ ಮುರಳಿ ಮೊದಲಾದವರು ಸಹಕರಿಸಿದರು.
ಸಮ್ಮೇಳನದ ಕಾರ್ಯಾಧ್ಯಕ್ಷ ಬೆಟ್ಟಂಪಾಡಿ ಸುಂದರ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಎಸ್.ಪಿ.ಗುರುದಾಸ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಗಮನ ಸೆಳೆದ ಹರಿಕಥೆ, ಗೋಷ್ಠಿಗಳು
ಹಿರಿಯ ಹರಿದಾಸ ಡಾ.ಲಕ್ಷ್ಮಣದಾಸ ತುಮಕೂರು ಪಾದುಕಾ ಪ್ರದಾನ ಎಂಬ ಹರಿಕಥೆಯನ್ನು ಪ್ರಸ್ತುತಪಡಿಸಿದರು. ಹಿರಿಯ ಹರಿದಾಸರುಗಳಾದ ಚಂದ್ರಕಾಂತ ಭಟ್ ಅಶ್ವತ್ಥಪುರ, ತೋನ್ಸೆ ಪುಷ್ಕಳ ಕುಮಾರ್, ಶಂನಾಡಿಗ ಕುಂಬ್ಳೆ ಮೊದಲಾದವರು ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದರು. ಹರಿದಾಸ ಶಿವಶಂಕರದಾಸ್ ಅಧ್ಯಕ್ಷತೆ ವಹಿಸಿದ್ದರು. ಶಾಂಭವಿ ಪ್ರಾಣೇಶ್, ವೈಭವಿ ಕುಂಬ್ಳೆ, ಮಹೇಶ್ ಗೌಡ, ರಮೇಶ್ ರಾವ್ ಬಿ, ದಿವಾಕರ ಶೆಟ್ಟಿ ಗೋಷ್ಠಿಗಳನ್ನು ನಿರ್ವಹಿಸಿದರು. ಹಿರಿಯ ಹರಿದಾಸರೊಂದಿಗೆ ಯುವ ಕೀರ್ತನಾಭ್ಯಾಸಿಗಳು ಸಂವಾದ ನಡೆಸಿದರು.
ಹರಿಕಥೆ ಈಗಲೂ ಅಸ್ತಿತ್ವ ಉಳಿಸಿರುವುದಕ್ಕೆ ಹಿರಿಯ ಹರಿದಾಸರ ತಪಸ್ಸು ಮತ್ತು ಗುಣಮಟ್ಟದ ಪ್ರದರ್ಶನ ಕಾರಣ. ಮುಂದಿನ ಜನಾಂಗ ಈ ಕಲೆಯನ್ನು ಉಳಿಸಿ, ಬೆಳೆಸಬೇಕು. ಯುವ ತಲೆಮಾರಿನಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ. ಅವರಲ್ಲಿರುವ ಕಲಾವಂತಿಕೆಯನ್ನು ಜಾಗೃತಗೊಳಿಸಬೇಕಾಗಿದೆ. ಹರಿಕಥೆಯ ಕುರಿತು ಜಾಗೃತಿ ಮೂಡಿಸುವುದೇ ಸಮ್ಮೇಳನದ ಉದ್ದೇಶ.
– ಕೆ.ಮಹಾಬಲ ಶೆಟ್ಟಿ, ಸಮ್ಮೇಳನಾಧ್ಯಕ್ಷರು
https://www.vijayavani.net/inauguration-of-samriddhi-sahakar-soudha