

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೀರ್ತನೆ, ಸಂಕೀರ್ತನೆ, ಕಥಾನುಸಂಧಾನ, ಮೌಲ್ಯ ಶಿಕ್ಷಣ, ಜಪ ಈ ಎಲ್ಲ ಆಧ್ಯಾತ್ಮಿಕ ಅಂಶಗಳನ್ನು ಮನರಂಜನೆಯ ಮೂಲಕ ಒದಗಿಸುವ ಹರಿಕಥಾ ಕಲೆ ಮಾನಸಿಕ ನೆಮ್ಮದಿ ನೀಡುವ ದಿವ್ಯೌಷಧ. ಹಾಗಾಗಿ ಈ ಕಲೆಯ ಬೆಳವಣಿಗೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಶ್ರೀ ರಾಧಾಕೃಷ್ಣ ದೇವಸ್ಥಾನ (ಬಾಳಂ ಭಟ್ ಸಭಾಂಗಣ) ಪ್ರಧಾನ ಸಂಚಾಲಕ ಎಂ.ಗಿರಿಧರ ಭಟ್ ಅಭಿಪ್ರಾಯಪಟ್ಟರು.
ಹಿರಿಯ ಕಲಾವಿದ ಕೀರ್ತಿಶೇಷ ವಿದ್ವಾನ್ ಎಂ.ಲಕ್ಷ್ಮೀ ನಾರಾಯಣ ಭಟ್ ಸ್ಮರಣಾರ್ಥ ರಾಧಾಕೃಷ್ಣ ದೇವಸ್ಥಾನದಲ್ಲಿ ಹರಿಕಥಾ ಪರಿಷತ್ ಆಯೋಜಿಸಿದ್ದ ಹರಿಕಥಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾರೋಪ ನುಡಿಗಳನ್ನಾಡಿದ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಇಂದು ವಾಕ್ಸ್ವಾತಂತ್ರ್ಯದ ಹೆಸರಿನಲ್ಲಿ, ಸನಾತನ ಧರ್ಮ, ಧಾರ್ಮಿಕ ಕ್ಷೇತ್ರಗಳು, ಧಾರ್ಮಿಕ ಮುಖಂಡರ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಯುತ್ತಿದೆ. ಇದನ್ನು ಸಂಘಟಿತರಾಗಿ ವಿರೋಧಿಸುವ ಅಗತ್ಯವಿದೆ. ಈ ಬಗ್ಗೆ ಪ್ರತಿರೋಧಿಸುವ ಜವಾಬ್ದಾರಿ ಪ್ರತಿಯೊಬ್ಬ ಕಲಾವಿದರಿಗೂ ಇದೆ ಎಂದರು.
ಉದ್ಯಮಿ ಎಂ.ರವೀಂದ್ರ ಶೇಟ್ ಶುಭ ಹಾರೈಸಿದರು. ಎನ್ಕೆಜಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು, ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್.ಗುರುರಾಜ್, ಬೆಟ್ಟಂಪಾಡಿ ಸುಂದರ ಶೆಟ್ಟಿ, ಲಕ್ಷ್ಮೀನಾರಾಯಣ ಭಟ್ಟರ ಪತ್ನಿ ವಿಜಯಲಕ್ಷ್ಮೀ ಭಟ್ ಅತಿಥಿಗಳಾಗಿದ್ದರು.
ಹರಿಕಥಾ ಪರಿಷತ್ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ, ಉಪಾಧ್ಯಕ್ಷ ಬಿ.ನಾರಾಯಣ ರಾವ್, ಮಂಗಳೂರು ವಿಭಾಗ ಸಂಚಾಲಕ ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಡಾ.ಎಸ್ಪಿ ಗುರುದಾಸ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಂಜುಳಾ ಜಿ.ರಾವ್ ಇರಾ ಭಕ್ತ ಪ್ರಹ್ಲಾದ ಎಂಬ ಹರಿಕಥೆಯನ್ನು ಪ್ರಸ್ತುತಪಡಿಸಿದರು. ಹಾರ್ಮೋನಿಯಂನಲ್ಲಿ ಎಂ.ರಮೇಶ್ ಹೆಬ್ಬಾರ್, ತಬಲಾದಲ್ಲಿ ಹೃಷಿಕೇಶ ರಾವ್ ಸಹಕರಿಸಿದರು.