ಐಪಿಎಲ್ ಪ್ರಶಸ್ತಿ ಗೆಲುವನ್ನು 3 ತಿಂಗಳ ಪುತ್ರನಿಗೆ ಅರ್ಪಿಸಿದ ಹಾರ್ದಿಕ್ ಪಾಂಡ್ಯ

iovqkcOl
Published on

ಮುಂಬೈ: ವರ್ಷಾರಂಭದಲ್ಲಿ ನಟಿ, ರೂಪದರ್ಶಿ ನತಾಶಾ ಸ್ಟಾಂಕೋವಿಕ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಬಳಿಕ ಲಾಕ್‌ಡೌನ್ ಸಮಯದಲ್ಲಿ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿ ಅಚ್ಚರಿ ನೀಡಿದ್ದರು. ಈ ನಡುವೆ ಸದ್ದಿಲ್ಲದೆ ಮದುವೆ ಮಾಡಿದ್ದರು. ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳುವುದಕ್ಕೆ ಮುನ್ನ ಪುತ್ರನನ್ನು ಸ್ವಾಗತಿಸಿದ್ದ ಹಾರ್ದಿಕ್ ಪಾಂಡ್ಯ ಇದೀಗ, ಮುಂಬೈ ಇಂಡಿಯನ್ಸ್ ಪರ ಕಂಡ ಪ್ರಶಸ್ತಿ ಗೆಲುವನ್ನು 3 ತಿಂಗಳ ಪುತ್ರ ಅಗಸ್ತ್ಯನಿಗೆ ಅರ್ಪಿಸಿದ್ದಾರೆ.

ದುಬೈನಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ತಂಡ ಮಣಿಸಿ 5ನೇ ಬಾರಿಗೆ ಪ್ರಶಸ್ತಿ ಜಯಿಸಿದ ಬಳಿಕ 27 ವರ್ಷದ ಹಾರ್ದಿಕ್ ಪಾಂಡ್ಯ, ಐಪಿಎಲ್ ಟ್ರೋಫಿ ಜತೆಗೆ ಕ್ಲಿಕ್ಕಿಸಿಕೊಂಡಿರುವ ಚಿತ್ರದ ಜತೆಗೆ, ‘ಇದು ನಿನಗಾಗಿ ಅಗಸ್ತ್ಯ. ಈ ತಂಡವನ್ನು ಪ್ರೀತಿಸುವೆ. ಮುಂಬೈ ಇಂಡಿಯನ್ಸ್’ ಎಂದು ಬರೆದುಕೊಂಡಿದ್ದಾರೆ.

ಕಳೆದ ಎರಡೂವರೆ ತಿಂಗಳಿನಿಂದ ಐಪಿಎಲ್‌ನಲ್ಲಿ ಆಡುವ ವೇಳೆ ಕುಟುಂಬ ಮತ್ತು ಪುತ್ರನನ್ನು ಮಿಸ್ ಮಾಡಿಕೊಂಡಿರುವ ಹಾರ್ದಿಕ್ ಪಾಂಡ್ಯ, ತವರಿಗೆ ಮರಳಲು ಇನ್ನಷ್ಟು ಸಮಯ ಕಾಯಬೇಕಾಗಿದೆ. ಇದೀಗ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿರುವ ಅವರು, ಟೆಸ್ಟ್ ತಂಡದಲ್ಲಿರದ ಕಾರಣ ಟಿ20 ಸರಣಿ ಮುಗಿದ ಬಳಿಕ ತವರಿಗೆ ಮರಳಲಿದ್ದಾರೆ. ಹಾಲಿ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ಬ್ಯಾಟ್ಸ್‌ಮನ್ ಆಗಿ ಆಡಿದ್ದ ಅವರು, 178.98ರ ಸ್ಟ್ರೈಕ್‌ರೇಟ್‌ನಲ್ಲಿ 281 ರನ್ ಬಾರಿಸಿದ್ದರು. ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಗೆಲುವಿಗೆ ಕೇವಲ 1 ರನ್ ಬೇಕಾಗಿದ್ದಾಗ ಔಟಾಗಿದ್ದರು. ಇದರಿಂದ ಗೆಲುವಿನ ರನ್ ಬಾರಿಸುವ ಅವಕಾಶದಿಂದ ವಂಚಿತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net