

Asia Cup 2025: ಇದೇ ಸೆಪ್ಟೆಂಬರ್ 9ರಿಂದ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ 2025ರ ಮೆಗಾ ಟೂರ್ನಿಯತ್ತ ಸದ್ಯ ಕ್ರಿಕೆಟ್ ಪ್ರೇಮಿಗಳ ಚಿತ್ತ ಮೂಡಿದೆ. ಈ ಮಧ್ಯೆ ಸೆ.14ರಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯ ಕುರಿತು ಇದೀಗ ಭಾರೀ ಚರ್ಚೆಗಳು ಭುಗಿಲೆದ್ದಿವೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕ್ ನಡುವಿನ ಪರಿಸ್ಥಿತಿ ಭಾರೀ ಜಟಿಲವಾಗಿದೆ. ಪಾಕ್ನೊಂದಿಗಿನ ಎಲ್ಲಾ ವ್ಯವಹಾರ-ವಹಿವಾಟು ಸಂಪರ್ಕ, ಸಂಬಂಧವನ್ನು ಕಡಿದುಕೊಂಡಿರುವ ನಮ್ಮ ದೇಶ, ವೈರಿ ರಾಷ್ಟ್ರದೊಂದಿಗೆ ಕ್ರಿಕೆಟ್ ಸಹ ಆಡಬಾರದು ಎಂಬ ಕೂಗಗಳು ವ್ಯಾಪಕವಾಗಿ ಕೇಳಿಬಂದಿವೆ.
ಈ ಸಂದರ್ಭದಲ್ಲಿ, ಭಾರತೀಯ ಚಾಂಪಿಯನ್ಸ್ ತಂಡವು ಇತ್ತೀಚೆಗೆ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯಾವಳಿಯಿಂದ ಹಿಂದೆ ಸರಿದು, ಪಾಕಿಸ್ತಾನ ವಿರುದ್ಧ ಪಂದ್ಯಗಳನ್ನು ಆಡಲು ನಿರಾಕರಿಸಿತು. ಇದರ ಬೆನ್ನಲ್ಲೇ ಏಷ್ಯಾ ಕಪ್ 2025ರ ಟೂರ್ನಿ ಕುರಿತು ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, "ಭಾರತ ತಂಡವು ಏಷ್ಯಾ ಕಪ್‌ನಲ್ಲಿ ಪಾಕ್ ವಿರುದ್ಧ ಆಡಬಾರದು. ಕ್ರಿಕೆಟ್ ದೇಶಕ್ಕಿಂತ ಮುಖ್ಯವಾದುದಲ್ಲ" ಎಂದು ಹೇಳಿದ್ದಾರೆ.
"ಬಿಸಿಸಿಐ ಯಾವುದು ಮುಖ್ಯ ಮತ್ತು ಅಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ತಮ್ಮ ಕುಟುಂಬಗಳನ್ನು ತೊರೆದು ಗಡಿಗಳಲ್ಲಿ ಹೋರಾಡಲು ತಮ್ಮ ಪ್ರಾಣವನ್ನು ಮುಡಿಪಿಟ್ಟು, ಕಡೆಗೆ ತ್ಯಾಗ ಮಾಡುವ ಸೈನಿಕರು ಅತ್ಯಂತ ಮುಖ್ಯ. ಅವರ ತ್ಯಾಗಗಳಿಂದಾಗಿಯೇ ನಾವು ಹೀಗಿರಲು ಸಾಧ್ಯ. ಯೋಧರ ತ್ಯಾಗಗಳಿಗೆ ಹೋಲಿಸಿದರೆ ಕ್ರಿಕೆಟ್ ಪಂದ್ಯ ತುಂಬಾ ಸಣ್ಣ ವಿಷಯ" ಎಂದಿದ್ದಾರೆ.
"ನಮ್ಮ ಸರ್ಕಾರದ ನಿಲುವು ಇದೇ ಆಗಿದೆ. ಒಂದೆಡೆ, ಸೈನ್ಯವು ಗಡಿಗಳಲ್ಲಿ ಹೋರಾಡುತ್ತಿರುವಾಗ ಕ್ರಿಕೆಟ್ ಆಡಲು ಹೋಗುವುದು ಸರಿಯಲ್ಲ. ದೇಶಕ್ಕಿಂತ ಯಾವುದೂ ಮುಖ್ಯವಲ್ಲ. ದೇಶಕ್ಕೆ ಹೋಲಿಸಿದರೆ ಕ್ರಿಕೆಟ್ ಬಹಳ ಸಣ್ಣ ವಿಷಯ. ರಾಷ್ಟ್ರ ಯಾವಾಗಲೂ ಮೊದಲಿಗೆ, ಆನಂತರ ಉಳಿದದ್ದು" ಎಂದು ಹೇಳಿದ್ದಾರೆ.