

ಹರಪನಹಳ್ಳಿ: ಅಭಿವೃದ್ಧಿ ನಿಗಮ ಬೇರೆ ಬೇರೆ ಜಾತಿಯವರ ಮಾಡಿದಂತೆ ಮರಾಠ ಅಭಿವೃದ್ದಿ ನಿಗಮ ಮಾಡಿದ್ದು ತಪ್ಪೇನಿಲ್ಲ, ಸೂಕ್ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹೇಳಿದರು.
ವಿಧಾನಪರಿಷತ್‌ಗೆ ಆಯ್ಕೆಯಾದ ಬಳಿಕ ಬುಧವಾರ ಆಗಮಿಸಿದ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೌಕರರ ಸಂಘದ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಭಿವೃದ್ಧಿ ನಿಗಮಗಳನ್ನು ಬೇರೆ ಜಾತಿಯವರಿಗೂ ಮಾಡಿದ್ದು, ಅದರಂತೆ ಮರಾಠರೂ ಕರ್ನಾಟದಲ್ಲಿದ್ದು ಅವರು ಕೂಡ ನಮ್ಮ ರಾಜ್ಯದವರೇ ಆಗಿದ್ದಾರೆ. ಮರಾಠಿ ಮಾತನಾಡಿದರೆ ಅವರೇನು ಮಹಾರಾಷ್ಟ್ರಕ್ಕೆ ಹೋಗಲ್ಲ. ಎಲ್ಲವನ್ನೂ ಗಮನಿಸಿಯೇ ಮುಖ್ಯಮಂತ್ರಿಯವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಮನವಿ: ತಾಲೂಕಿನಲ್ಲಿ 16 ಪದವಿ ಪೂರ್ವ ಕಾಲೇಗಳಿದ್ದು, ಸಂಬಳ ರಹಿತವಾಗಿ 40 ಉಪನ್ಯಾಸಕರು 8 ತಿಂಗಳಿನಿಂದ ವೇತನವಿಲ್ಲದೆ ಕುಟುಂಬ ಸಾಗಿಸುತ್ತಿದ್ದಾರೆ. ಯಾವುದೇ ರೀತಿ ಸ್ವಂತ ಉದ್ಯೋಗವಿಲ್ಲದೆ ಮನೆ ಪಾಠ ಮಾಡಲು ಸಾಧ್ಯವಾಗದೆ ಕುಟುಂಬ ನಿರ್ವಹಣೆ ಮಾಡಲು ಕಷ್ಟಕರವಾಗಿದ್ದು ಕೋವಿಡ್-19 ಸಂಕಷ್ಟ ಪರಿಹಾರ ನಿಧಿ ಒದಗಿಸಬೇಕು ಎಂದು ಅರೆಕಾಲಿಕ ಉಪನ್ಯಾಸಕರು ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ಹಾಗೂ ಎನ್‌ಪಿಎಸ್ ನೌಕರರು, ಉಪನ್ಯಾಸಕರು, ಶಿಕ್ಷಕರು ಶಶೀಲ ನಮೋಶಿಯವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಗೌರವಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಎಸ್.ವೀರೇಶ್, ಎನ್.ಜಿ.ಮನೋಹರ್, ಸೂರ್ಯನಾಯ್ಕ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್, ಪ್ರೌಢಶಾಲೆ ಶಿಕ್ಷಕರ ಸಂಘದ ಹೂವಣ್ಣ, ಸಿ.ರುದ್ರಪ್ಪ, ಲತಾ ರಾಥೋಡ್, ಷಣ್ಮುಖಪ್ಪ, ಟಿ.ಎಂ.ಕೊಟ್ರೇಶ್ ಸೇರಿದಂತೆ ಇತರರಿದ್ದರು.