

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಸಿಕ್ಕಿದ ಚಿನ್ನದ ಸರವನ್ನು ಕಳೆದುಕೊಂಡಿದ್ದ ಉಜಿರೆಯ ಸಚಿನ್ ಎಂಬುವರಿಗೆ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕಾತರಕಿ ಸಮ್ಮುಖದಲ್ಲಿ ಶ್ರೀ ದೇವಳದ ಭದ್ರತಾ ಸಿಬ್ಬಂದಿ ಮುಖ್ಯಸ್ಥ ದಾಮೋದರ ನಾಯರ್ ಹಸ್ತಾಂತರಿಸಿದರು.
ಭಾನುವಾರ ಸರತಿಯ ಸಾಲಿನಲ್ಲಿ ನಿಂತಿದ್ದ ಬೆಂಗಳೂರಿನ ಶ್ರೀನಿವಾಸಪ್ಪ ಎಂಬುವರಿಗೆ ಚಿನ್ನದ ಸರ ದೊರಕಿತು. ಅದನ್ನು ದೇವಳದ ಭದ್ರತಾ ಸಿಬ್ಬಂದಿ ಮುಖ್ಯಸ್ಥ ದಾಮೋದರ ನಾಯರ್ ಅವರಿಗೆ ನೀಡಿದರು. ನಂತರ ಸರ ದೊರಕಿದ ಬಗ್ಗೆ ದಾಮೋದರ ನಾಯರ್ ಅವರು ಧ್ವನಿವರ್ಧಕದ ಮೂಲಕ ಹಲವು ಭಾರಿ ಮಾಹಿತಿ ನೀಡಿದರು. ಅಲ್ಲದೆ ಸರ ಸಿಕ್ಕಿದ ಬಗ್ಗೆ ಭದ್ರತಾ ಸಿಬ್ಬಂದಿ ಕೂಡಾ ಭಕ್ತರಲ್ಲಿ ತಿಳಿಸಿದರು. ಸರತಿ ಸಾಲಿನಲ್ಲಿ ಸಚಿನ್ ಎಂಬುವರ ಮಗಳ ಚಿನ್ನದ ಸರ ಬಿದ್ದು ಹೋಗಿದ್ದು, ಅವರ ಗಮನಕ್ಕೆ ಬಂತು. ಬಳಿಕ ಅವರು ದಾಮೋದರ್ ಅವರನ್ನು ಸಂಪರ್ಕಿಸಿ ಸರದ ಗುರುತು ಹೇಳಿ ಠಾಣಾಧಿಕಾರಿಗಳ ಸಮ್ಮುಖದಲ್ಲಿ ಶ್ರೀ ದೇಗುಲದ ಆಡಳಿತ ಕಚೇರಿಯಲ್ಲಿ ಸರವನ್ನು ಪಡೆದರು. ದೇಗುಲದ ಶಿಷ್ಟಾಚಾರ ವಿಭಾಗದ ಶಿವರಾಮ ಮಾನಾಡು, ಸಚಿನ್ ಮನೆಯವರು ಉಪಸ್ಥಿತರಿದ್ದರು.