

ವಿಜಯವಾಣಿ ಸುದ್ದಿಜಾಲ ಜನ್ನಾಡಿ
ದೇಶ ಸೇವೆಯೇ ಶ್ರೀರಾಮನ ನೈಜ ಸೇವೆ. ಸಮಾಜದಲ್ಲಿ ಅಶಕ್ತರ, ದಲಿತರ ಸೇವೆ ಮಾಡಿ ಸೂರಿಲ್ಲದವರಿಗೆ ಮನೆ ನಿರ್ಮಿಸಿಕೊಡುವುದು ಅದು ಶ್ರೀರಾಮನ ಸೇವೆ. ಈ ನಿಟ್ಟಿನಲ್ಲಿ ರಾಜೀವ ಶೆಟ್ಟಿ ಟ್ರಸ್ಟ್ ಕಾರ್ಯ ಅಭಿನಂದನಾರ್ಹ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.
ಕುಂದಾಪುರದ ಹಾರ್ದಳ್ಳಿ ಮಂಡಳಿ ಗ್ರಾಮದ ಜನ್ನಾಡಿ-ಮಣಿಗೇರಿ ಕೊರಗರ ಕಾಲನಿಯಲ್ಲಿ ಇತ್ತೀಚೆಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹದಿನಾಲ್ಕು ಉಚಿತ ಮನೆಗಳ ಗೃಹಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಚಿವ ಕೆ.ಎಚ್ ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಿ, ಶೋಷಣೆ ಹಾಗೂ ಅಸಮಾನತೆಗಳ ಹೋಗಲಾಡಿಸಲು ಮಠ ಮಂದಿರಗಳು ಮುಂದಾದರೆ ಸಾಮಾಜಿಕ ಪರಿವರ್ತನೆ ಸಾಧ್ಯ. ಸರ್ಕಾರದಿಂದ ಮಾಡಲಾಗದ ಕೆಲಸವನ್ನು ಟ್ರಸ್ಟ್ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಟ್ಟ ಡಾ.ಎಚ್ಎಸ್.ಶೆಟ್ಟಿ ಅವರ ಸಾಮಾಜಿಕ ಕಳಕಳಿ ಪ್ರಶಂಸಾರ್ಹ ಎಂದರು.
ಶಾಸಕ ಕಿರಣ್ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್ ಶೆಟ್ಟಿ ಪ್ರಸ್ತಾವನೆಗೈದರು. ಮಾಜಿ ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಪ್ರಮುಖರಾದ ಬಸ್ರೂರು ಅಪ್ಪಣ್ಣ ಹೆಗ್ಡೆ, ಶಂಕರ ಹೆಗ್ಡೆ, ಸರ್ವೋತ್ತಮ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಚಂದ್ರಶೇಖರ ಶೆಟ್ಟಿ ದ್ಯಾವಲ್ಬೆಟ್ಟು, ಹಾಲಾಡಿ ನಾಗರಾಜ ಶೆಟ್ಟಿ, ಗುರುನಾಥ ಶಿರಹಟ್ಟಿ, ಕುಮಾರದಾಸ ಹಾಲಾಡಿ, ಸುಶೀಲಾ ನಾಡ ಮೊದಲಾದವರಿದ್ದರು. ಮುರಳಿ ಕಡೆಕಾರ್ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಗುತ್ತಿಗೆ ಕಾಮಗಾರಿ ನಡೆಸಿಕೊಟ್ಟ ಕೊಕಾಡಿ ಉದಯಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹದಿನಾಲ್ಕು ಮನೆಗಳ ಹಕ್ಕುಪತ್ರ, ಕೀಲಿಕೈಗಳನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ದೀಪಾ ಶೆಟ್ಟಿ ಹಾಗೂ ಪಿಡಿಒ ರೇಖಾ ಅವರಿಗೆ ಹಸ್ತಾಂತರಿಸಿದರು.