ಹಂಪಿ ( ವಿರೂಪಾಕ್ಷ ದೇವಾಕಯ ವೇದಿಕೆ): ಯುವ ಕವಿ ಡಾ.ರವಿಚಂದ್ರ ಅವರ ‘ಹೆಸರಿಲ್ಲದ ಅನಾಥ’ ಕವಿತೆಯಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಸರಣಿ ಬಾಣಂತಿಯರ ಸಾವಿನ ಬಗ್ಗೆ ಪ್ರಸ್ತಾಪಿಸಿದರು. ತೋರಿದರು. ಜೀವ ಉಳಿಸುವ ಔಷಧಗಳೇ ವಿಷವಾಗಿ ಬದಲಾಗಿವೆ ಇಂದು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಜನಮನದ ತಳಮಳ ಬಿಚ್ಚಿಟ್ಟ ಕವಿತೆಗಳು
ಯುವ ಕವಿಯತ್ರಿ ಎಚ್.ಡಿ.ತೇಜವತಿ ವಾಚಿಸಿದ ‘ಪರಮಾತ್ಮನ ನುಡಿ’ ಕವಿತೆ ಎಡ ಚಿಂತಕರ ದಂದ್ವ ನಿಲುವು ಪ್ರಶ್ನಿಸಿ, ನಡೆ ನುಡಿಯಲ್ಲಿನ ಬೂಟಾಟಿಕೆ ಎತ್ತಿ ತೋರಿಸಿತು. ಎಡ ಚಿಂತಕರನ್ನು ನಕ್ಷತ್ರಿಕರ ದಂಡು ಎನ್ನುವ ಲೇವಡಿ ಮಾಡಿತು. ಶೋಷಿತರ ಸೋಗಿನಲ್ಲಿರುವ ಹೆಡೆ ಮುದಿರಿಕೊಂಡು ನಟಿಸುತ್ತಿರುವ ಘಟ ಸರ್ಪಗಳು ಎಂದು ಟೀಕಿಸಿತು.
ಕನಕಗಿರಿಯ ಫರ್ವಿನ್ ಬೇಗಂ ರಚಿಸಿದ ಕವನ ಮದುವೆಯಾಗಿ ಸಂಸಾರ ತೂಗಿಸುತ್ತಿರುವ ಹೆಣ್ಣಿನ ತಲ್ಲಣವನ್ನು ಸಹೃದಯಿಗಳ ಮುಂದೆ ತೆರದಿಟ್ಟಿತು. ಗಂಡನ ಮುಂದೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಚಡಪಡಿಸುವ ಹೆಣ್ಣಿನ ಸ್ವಗತ ಕವನದಲ್ಲಿ ಮೂಡಿಬಂದಿತು. ನಿತ್ಯವು ಮದ್ಯದ ಅಮಲಿನಲಿ ಬಂದು ಮೇಲೆರಗುವ ಗಂಡನ ಸಹಿಸಿ, ತಣಿಸಿ ಅವಳ ದೇಹದ ಗರ್ಭವೇ ಗಾಯವಾಗಿದೆ. ಗಂಡನ ಗಂಡಸ್ತನದ ಹೂಂಕಾರಕೆ ಹೆಂಡತಿಯ ಶೋಕ ಕೇಳದಾಗಿದೆ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಕೋಮಲ ಮನಸ್ಸು ಸಂಕಟದಲ್ಲಿ ಜೀವನ ಸಾಗಿಸುತ್ತಿದೆ. ಬದಲಾವಣೆ ಹಾಗೂ ಬಿಡುಗಡೆಗೂ ಎಡೆ ಇಲ್ಲದ ಸ್ಥಿತಿಯಲ್ಲಿ ಕನಸುಗಳೆ ಹೆಣ್ಣಿಗೆ ಆಸರೆಯಾಗಿವೆ ಎಂದು ಹೆಣ್ಣಿನ ನೋವು ಬಿಚ್ಚಿಟ್ಟರು.
ಕೊಪ್ಪಳದ ಕನ್ನಡ ಎಂ.ಎ. ವಿದ್ಯಾರ್ಥಿ ಪವನಕುಮಾರ್ ಮಡಿವಂತಿಕೆ ಆಲೋಚನೆ ತೊರೆದು ರಚಿಸಿದ ‘ಸೂಳೆಯ ಸ್ವಗತ’ ಎಂಬ ಕವನ ವಾಚಿಸುವ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿದರು. ಶಿವಪ್ರಕಾಶ್ ಕಂಬೂರ್ ಅವರು ಗಜಲ್ ವಾಚಿಸಿದರು. ಹಂಪಿ ವೈಭವ, ಹಂಪಿ ಸ್ಥಳ ಮಹಿಳೆ, ಪ್ರೇಮ, ಸ್ರ್ತೀ ಪರ ಚಿಂತನೆ ರಚಿಸಿದ ಕವನಗಳನ್ನು ಉಳಿದ ಕವಿಗಳು ವಾಚಿಸಿದರು.