ಹಮಾಸ್​ ಕದನ ವಿರಾಮ ಉಲ್ಲಂಘನೆ: Gaza ಮೇಲೆ ಇಸ್ರೇಲ್​ ಪ್ರಬಲ ದಾಳಿ, 60 ಮಂದಿ ಬಲಿ

Benjamin Netanyahu
Published on

ಗಾಜಾ: ಗಾಜಾ(Gaza) ಮೇಲೆ ಇಸ್ರೇಲ್​ ನಡೆಸಿದ ದಾಳಿಯಲ್ಲಿ ಅನೇಕ ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆ ಅಧಿಕಾರಿಗಳು ಬುಧವಾರ (ಅಕ್ಟೋಬರ್,29) ತಿಳಿಸಿದ್ದಾರೆ.

ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿದ ನಂತರ ಗಾಜಾದ ಮೇಲೆ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಿಲಿಟರಿಗೆ ಆದೇಶಿಸಿದ ನಂತರ ಈ ದಾಳಿಗಳು ನಡೆಸಲಾಗಿದೆ.

ಗಾಜಾದ ಮೇಲೆ ರಾತ್ರಿಯಿಡೀ ಎರಡು ಇಸ್ರೇಲಿ ಪಡೆಗಳು ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ 3 ಮಹಿಳೆಯರು ಮತ್ತು 6 ಮಕ್ಕಳು ಸೇರಿದಂತೆ ಕನಿಷ್ಠ 10 ಮೃತದೇಹಗಳು ಆಸ್ಪತ್ರೆಗೆ ತಲುಪಿವೆ ಎಂದು ಕೇಂದ್ರ ನಗರವಾದ ದೇರ್ ಅಲ್-ಬಲಹ್‌ನಲ್ಲಿರುವ ಅಕ್ಸಾ ಆಸ್ಪತ್ರೆ ಮಾಹಿತಿ ನೀಡಿದೆ. ಅಲ್ಲದೆ, ದಕ್ಷಿಣ ಗಾಜಾದಲ್ಲಿ, ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯು ಆ ಪ್ರದೇಶದಲ್ಲಿ 5 ಕಡೆಗಳಲ್ಲಿ ಇಸ್ರೇಲ್​ ದಾಳಿ ನಡೆಸಿದ ನಂತರ 20 ಮೃತದೇಹಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಇದರಲ್ಲಿ 13 ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆಂದು ತಿಳಿಸಲಾಗಿದೆ.

ಮಧ್ಯ ಗಾಜಾದ ಇತರೆಡೆಗಳಲ್ಲಿ, ಅಲ್-ಅವ್ದಾ ಆಸ್ಪತ್ರೆ 30 ಶವಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ. ಇದರಲ್ಲಿ 14 ಮಕ್ಕಳು ಸಹ ಸೇರಿವೆ.

ಗಾಜಾ ಮೇಲೆ ಪ್ರಬಲ ದಾಳಿ ನೆಡೆಸುವಂತೆ ಇಸ್ರೇಲ್ ಪ್ರಧಾನಿ ಅದೇಶ

ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಗಾಜಾ ಪಟ್ಟಿಯಲ್ಲಿ ತಕ್ಷಣದ ಬಲವಾದ ದಾಳಿ ಮಾಡುವಂತೆ ಆದೇಶಿಸಿದ್ದಾರೆ.

ಅಲ್ಲದೆ, ದಕ್ಷಿಣ ಗಾಜಾದಲ್ಲಿ ಹಮಾಸ್ ಇಸ್ರೇಲ್​ ಪಡೆಗಳ ಮೇಲೆ ಗುಂಡು ಹಾರಿಸಿದೆ ಎಂದು ಇಸ್ರೇಲ್ ವರದಿ ಮಾಡಿದೆ. ಪ್ರಧಾನಿ ನೆತನ್ಯಾಹು ದಾಳಿಗೆ ಆದೇಶಿಸಿದ ಕೆಲವೇ ನಿಮಿಷಗಳಲ್ಲಿ, ಮಂಗಳವಾರ ಸಂಜೆ ನಿಗದಿಯಾಗಿದ್ದ ಮತ್ತೊಂದು ಒತ್ತೆಯಾಳು ಮೃತದೇಹದ ಹಸ್ತಾಂತರವನ್ನು ಮುಂದೂಡುವುದಾಗಿ ಹಮಾಸ್ ಘೋಷಿಸಿತು.

ಅಕ್ಟೋಬರ್ 10 ರಂದು ಜಾರಿಗೆ ಬಂದ ಕದನ ವಿರಾಮ ಒಪ್ಪಂದದ ಭಾಗವಾಗಿ 28 ಒತ್ತೆಯಾಳುಗಳಲ್ಲಿ 16 ನೇ ಮೃತದೇಹಗಳನ್ನು ಸೋಮವಾರ ಹಮಾಸ್ ಹಸ್ತಾಂತರಿಸಿತ್ತು. ಅದರೆ, ವಿಧಿವಿಜ್ಞಾನ ಪರೀಕ್ಷೆಯ ನಂತರ, ಅವಶೇಷಗಳು ಎರಡು ವರ್ಷಗಳ ಹಿಂದೆ ಹಿಂತಿರುಗಿಸಲಾದ ಅದೇ ಒತ್ತೆಯಾಳು ಓಫಿರ್ ತ್ಜಾರ್ಫಾತಿ ಎಂದು ಕಂಡುಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net