ಅರ್ಧತಾಸು ವಿದ್ಯುತ್ ಲೋಡ್ ಶೆಡ್ಡಿಂಗ್

Published on

ಕುಂಬಳೆ: ಕರ್ನಾಟಕದಲ್ಲಿ ವಿದ್ಯುತ್ ಲೈನ್‌ಗಳ ದುರಸ್ತಿ ಕೆಲಸದ ಹಿನ್ನೆಲೆಯಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಇದರಂತೆ ವಿದ್ಯಾನಗರ, ಮುಳ್ಳೇರಿಯ, ಮಂಜೇಶ್ವರ, ಕುಬಣೂರು ಸೇರಿದಂತೆ ಒಟ್ಟು ಎಂಟು ವಿದ್ಯುತ್ ಸಬ್ ಸ್ಟೇಷನ್‌ಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಸೋಮವಾರ ಸಂಜೆಯಿಂದ ದೈನಂದಿನ ಅರ್ಧ ತಾಸು ಲೋಡ್ ಶೆಡ್ಡಿಂಗ್ ಮಾಡಲಾಗುವುದು.

ಇದು ಮುಂದಿನ ಐದು ದಿನಗಳ ತನಕ ಮುಂದುವರಿಯಲಿದೆ ಎಂದು ವಿದ್ಯುತ್ ಟ್ರಾನ್ಸ್‌ಮಿಷನ್ ಡಿವಿಷನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಮಯ ವ್ಯಾಪ್ತಿ ಕೆಲವೊಮ್ಮೆ ಇನ್ನೂ ಮುಂದುವರಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆ ಆರಂಭಗೊಂಡಿರುವ ವೇಳೆಯಲ್ಲೇ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕರ್ನಾಟಕದ ವಾರಾಹಿ 220 ಕೆ.ವಿ. ವಿದ್ಯುತ್ ಲೈನ್ ದುರಸ್ತಿ ನಡೆಯುತ್ತಿದ್ದು, ಮುಳ್ಳೇರಿಯ ಪೆರ್ಲ, ಬದಿಯಡ್ಕ, ಅನಂತಪುರ, ಕಾಸರಗೋಡು ಸಬ್‌ಸ್ಟೇಷನ್ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿದೆ. ಬಿಸಿಲಿನ ತೀವ್ರತೆ ಕಾರಣ ವಿದ್ಯುತ್ ಉಪಯೋಗ ಮಿತಿ ಮೀರಿದೆ. ಎರಡು ವಾರಗಳಿಂದ ಫ್ಯಾನ್, ಹವಾನಿಯಂತ್ರಕ ಬಳಕೆ ಹೆಚ್ಚಿರುವುದರಿಂದ ವಿದ್ಯುತ್ ಪೂರೈಕೆ ವ್ಯತ್ಯಯ ಗ್ರಾಹಕರನ್ನು ಕಂಗಾಲಾಗಿಸಿದೆ.

10 ಮೆಗಾವಾಟ್ ವಿದ್ಯುತ್ ಇಳಿಕೆ

ಜಿಲ್ಲೆಯಲ್ಲಿ ಮಂಜೇಶ್ವರ, ಕುಬಣೂರು ವಿದ್ಯುತ್ ಸಬ್ ಸ್ಟೇಷನ್ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಕರ್ನಾಟಕದಿಂದ ಲಭಿಸುವ ವಿದ್ಯುತ್ ಉಪಯೋಗಿಸಲಾಗುತ್ತಿದೆ. ಇಲ್ಲಿಗೆ ಕರ್ನಾಟಕದಿಂದ ದೈನಂದಿನ 50 ಮೆಗಾವಾಟ್ ವಿದ್ಯುತ್ ಲಭಿಸುತ್ತಿದೆ. ಆದರೆ ದುರಸ್ತಿ ಕಾರಣವೊಡ್ಡಿ ಪೂರೈಕೆಯನ್ನು ಈಗ 10 ಮೆಗಾವಾಟ್ ಆಗಿ ಇಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net