ಮಂಗಳೂರು: ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನೂತನ ಗೋಪುರ ಉದ್ಘಾಟನೆ ಬುಧವಾರ ನಡೆಯಿತು.

ವಿಧಾನಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಮನುಷ್ಯನಿಗೆ ಹಣ, ಅಧಿಕಾರದ ಹೊರತಾಗಿ ಮನಸ್ಸಿಗೆ ಶಾಂತಿ ಬೇಕು. ಅದಕ್ಕೆ ದೇವಸ್ಥಾನಗಳಿಗೆ ಭೇಟಿ ನೀಡಬೇಕು. ಸುಮಾರು ಒಂದೂವರೆ ಸಾವಿರ ವರ್ಷ ಇತಿಹಾಸ ಹೊಂದಿದ ಪುರಾತನ ದೇಗುಲ ಇದಾಗಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸಿದಾಗ ಶಾಂತ ವಾತಾವರಣ, ಮನಸ್ಸಿಗೆ ಉಲ್ಲಾಸ ಮೂಡುತ್ತದೆ. ದೇವಸ್ಥಾನಗಳಲ್ಲಿ ಗೋಪುರಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯವಿದೆ. ಅದರಿಂದಲೇ ದೇಗುಲದ ಚಿತ್ರಣ ಸಿಗುತ್ತದೆ. ಬೋಳಾರದಲ್ಲಿಯೂ ಸುಂದರ ಗೋಪುರ ನಿರ್ಮಾಣವಾಗಿದ್ದು, ಈ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ದೊರಕಿದ್ದು, ಪುಣ್ಯ ಎಂದು ಹೇಳಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಭಾಗವಹಿಸಿ ಶುಭ ಹಾರೈಸಿದರು. ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಬಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ವಿ. ಭಟ್, ಉದ್ಯಮಿ ಮಹಾಬಲ ಕೊಟ್ಟಾರಿ, ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಎಸ್.ಪಿ., ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಂಗಾಧರ ಕೋಟ್ಯಾನ್, ರಮಣಿ ಅಂಚನ್, ಸುಭಾಸ್‌ಚಂದ್ರ ಕಾಂಚನ್, ಎಂ. ಭಾಸ್ಕರ್ ರಾವ್, ಕೇಶವ ಶೆಟ್ಟಿ ಕದ್ರಿ, ವನಮಾಲ ವೈ. ಸುವರ್ಣ, ವೆಂಕಟ್ಟ ಸೂಟರ್‌ಪೇಟೆ ಸೇರಿದಂತೆ ಮತ್ತಿತರರು ಇದ್ದರು.