

ನವದೆಹಲಿ: ಹಲ್ದ್ವಾನಿ ಹಿಂಸಾಚಾರದ ಪ್ರಮುಖ ಶಂಕಿತ ಅಬ್ದುಲ್ ಮಲಿಕ್ ನನ್ನು ಪೊಲೀಸರು ಹಲ್ದ್ವಾನಿಯ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಮಾರ್ಚ್ 6 ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ದೆಹಲಿಯಲ್ಲಿ ಮಲಿಕ್ ನನ್ನು ವಶಕ್ಕೆ ಪಡೆದ ನೈನಿತಾಲ್ ಪೊಲೀಸರು ಆರೋಪಿಯನ್ನು ಶನಿವಾರ ರಾತ್ರಿ ಹಲ್ದ್ವಾನಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ 10 ದಿನಗಳ ವಿಚಾರಣೆ ಅಗತ್ಯವಿದೆ ಎಂದು ಮನವಿ ಮಾಡಿದರು. ಪೊಲೀಸರ ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು ಮಾರ್ಚ್ 6 ರವರೆಗೆ ಅಬ್ದುಲ್ ಮಲಿಕ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಿದೆ. ಈ ಅವಧಿಯ ನಂತರ ಪ್ರಕರಣವನ್ನು ಮುಂದಿನ ವಿಚಾರಣೆಗೆ ನಿಗದಿಪಡಿಸಲಾಗಿದೆ.
ದೆಹಲಿಯಿಂದ ಅಬ್ದುಲ್ ಮಲಿಕ್ ನನ್ನು ಬಂಧಿಸಿದ ಉತ್ತರಾಖಂಡ ಪೊಲೀಸ್ ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ತಲಾ 50ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ವಕ್ತಾರ ಐಜಿ ನೀಲೇಶ್ ಭರ್ನೆ ತಿಳಿಸಿದ್ದಾರೆ.
ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಗಾಗಿ ನೈನಿತಾಲ್ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದರು. ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಉತ್ತರಾಖಂಡ ಪೊಲೀಸ್ ಪ್ರಧಾನ ಕಚೇರಿ (ಪಿಎಚ್ ಕ್ಯೂ) ವಕ್ತಾರ ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 74 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಭೆಕೋರರನ್ನು ಬೆಂಬಲಿಸುವವರ ವಿರುದ್ಧ ಉತ್ತರಾಖಂಡ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಿಂಸಾಚಾರದ ಸಮಯದಲ್ಲಿ ಕಲ್ಲು ತೂರಾಟದ ಘಟನೆಗಳು, ವಾಹನಗಳಿಗೆ ಬೆಂಕಿ ಹಚ್ಚುವುದು ಮತ್ತು ಸ್ಥಳೀಯ ಪೊಲೀಸ್ ಠಾಣೆಯನ್ನು ಸುತ್ತುವರೆದಿರುವ ಗುಂಪು ಸಾಕ್ಷಿಯಾಗಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು, ಆಡಳಿತವು ಪ್ರದೇಶದಲ್ಲಿ ಶೂಟ್-ಆಟ್-ಸೈಟ್ ಆದೇಶವನ್ನು ನೀಡಬೇಕಾಯಿತು.
ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಹಲ್ದ್ವಾನಿ ಹಿಂಸಾಚಾರದ ಪ್ರಮುಖ ಆರೋಪಿ ಅಬ್ದುಲ್ ಮಲಿಕ್ ವಿರುದ್ಧ 2.44 ಕೋಟಿ ರೂಪಾಯಿ ವಸೂಲಿ ನೋಟಿಸ್ ಜಾರಿ ಮಾಡಿದ್ದು, ಘರ್ಷಣೆಯ ಸಂದರ್ಭದಲ್ಲಿ ಸರ್ಕಾರಿ ಆಸ್ತಿಗೆ ಉಂಟಾದ ಹಾನಿಯನ್ನು ಭರಿಸಲು ಹಣವನ್ನು ಠೇವಣಿ ಮಾಡುವಂತೆ ಕೇಳಿದೆ.
ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, 250 ಪೊಲೀಸರು ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಗುಂಪು ಬಂಭುಲ್ಪುರ ಪೊಲೀಸ್ ಠಾಣೆಯನ್ನು ಸುಟ್ಟುಹಾಕಿತ್ತು. ಎರಡು ದಿನಗಳ ಕಾಲ ಇಡೀ ಊರಿನಲ್ಲಿ ಕರ್ಫ್ಯೂ ಹೇರಲಾಗಿತ್ತು.