ಪೊಲೀಸರ ಶವ ಸುಟ್ಟು ಸಾಕ್ಷ್ಯ ನಾಶ ಮಾಡಬೇಕೆಂದಿದ್ದೆ, ಸಾಧ್ಯವಾಗಲಿಲ್ಲ ಪರಾರಿಯಾದೆ!

vikas dubey
Published on

ಲಖನೌ: ಪೊಲೀಸರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡು ಗುರುವಾರ ಮಧ್ಯಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುಖ್ಯಾತ ರೌಡಿ ವಿಕಾಸ್​ ದುಬೆ, ಅಂದು ರಾತ್ರಿ ಪೊಲೀಸರ ಶವಗಳನ್ನು ಪಾಳುಬಾವಿಗೆ ಎಸೆದು, ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಬೇಕು ಎಂದುಕೊಂಡೆ. ಆದರೆ, ಅದು ಸಾಧ್ಯವಾಗದೆ ಅನಿವಾರ್ಯವಾಗಿ ಪರಾರಿಯಾಗಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.

ಪೊಲೀಸರು ದಾಳಿ ಮಾಡುವ ಮಾಹಿತಿ ಆಪ್ತ ಪೊಲೀಸ್​ ಸಿಬ್ಬಂದಿಯ ಮೂಲಕ ಸಿಕ್ಕಿತ್ತು. ಹಾಗಾಗಿ, ಶಸ್ತ್ರಸಜ್ಜಿತರಾಗಿ ಬರುವಂತೆ ನನ್ನ ಹಿಂಬಾಲಕರಿಗೆ ಸೂಚನೆ ರವಾನಿಸಿದೆ. ಆಯಕಟ್ಟಿನ ಜಾಗದಲ್ಲಿ ಕುಳಿತ ಅವರೆಲ್ಲರೂ ನನ್ನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ತಿಳಿಸಿದ್ದಾನೆ.

ಪೊಲೀಸರ ತಂಡ ತನ್ನನ್ನು ಎನ್​ಕೌಂಟರ್​ ಮಾಡಿ ಸಾಯಿಸಲು ಬರುತ್ತಿದೆ ಎಂಬ ಆತಂಕದಲ್ಲಿ ತಾನು ಪೊಲೀಸ್​ ತಂಡದ ಮೇಲೆ ದಾಳಿ ಮಾಡಿದ್ದಾಗಿ ಆತ ಹೇಳಿದ್ದಾನೆ.

ದಾಳಿಯಲ್ಲಿ ಹತರಾದ ಪೊಲೀಸ್​ ಸಿಬ್ಬಂದಿಯ ಶವಗಳನ್ನು ತಾನು ಅದಾಗಲೆ ಪಾಳುಬಾವಿಗೆ ಹಾಕಿದ್ದಾಗಿತ್ತು. ಪೆಟ್ರೋಲ್​ ಸುರಿದು ಬೆಂಕಿ ಹೆಚ್ಚಬೇಕೆನ್ನುವಷ್ಟರಲ್ಲಿ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗಾಗಿ ತಾನು ಪರಾರಿಯಾಗಿದ್ದಾಗಿ ಪುನರುಚ್ಚರಿಸಿದ್ದಾನೆ.

ನನಗೆ ಬಂದ ಮಾಹಿತಿಯ ಪ್ರಕಾರ ಪೊಲೀಸರು ಬೆಳಗ್ಗೆ ದಾಳಿ ಮಾಡಬೇಕಿತ್ತು. ದುರದೃಷ್ಟವಶಾತ್​ ಅವರು ರಾತ್ರಿಯೇ ದಾಳಿ ಮಾಡಿಬಿಟ್ಟರು. ನಮಗೆ ಊಟ ಕೂಡ ಮಾಡಲೂ ಸಾಧ್ಯವಾಗಲಿಲ್ಲ ಎಂದು ಅಲವತ್ತುಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net