ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಶುಕ್ರವಾರ ನಡೆಯಿತು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ, ಕ್ಷೇತ್ರಾಡಳಿತ ಸಮಿತಿಯನ್ನು ಪುನಾರಚಿಸಲಾಯಿತು. ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾಗಿ ಸಾಹುಕಾರ್ ಕೊರಗಪ್ಪ ಅವರ ಮೊಮ್ಮಗ ಎಚ್.ಜಯರಾಜ್ ಸೋಮಸುಂದರಂ(ಎಚ್.ಎಸ್.ಜಯರಾಜ್) ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಊರ್ಮಿಳಾ ರಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಾಧವ ಸುವರ್ಣ, ಕೋಶಾಧಿಕಾರಿಯಾಗಿ ಪದ್ಮರಾಜ್ ಆರ್.ಪೂಜಾರಿ, ಸಮಿತಿ ಸದಸ್ಯರಾಗಿ ಎಚ್.ಎಸ್.ಸಾಯಿರಾಂ, ಸಂತೋಷ್ ಜನಾರ್ದನ ಪೂಜಾರಿ, ಜಗದೀಪ್ ಸುವರ್ಣ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ವೇಳೆ ಅಭಿವೃದ್ಧಿ ಸಮಿತಿಯನ್ನು ಪುನಾರಚಿಸಿ 51 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಮಾಜದ ಸಂಘಟನೆ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಕ್ರಾಂತಿಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸುವಂತೆ ಬಿ.ಜನಾರ್ದನ ಪೂಜಾರಿ ನಿರ್ದೇಶನ ನೀಡಿದರು.