ಅದಮಾರು ಮಠದ ವಿಶ್ವಪ್ರಿಯ ಶ್ರೀ ಆಶೀರ್ವಚನ
ಪಲಿಮಾರು ವಿದ್ಯಾಧೀಶ ಶ್ರೀಗಳಿಗೆ ಗುರುವಂದನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತ ವಿಶ್ವಗುರುವಾಗುತ್ತಿರುವ ಈ ಸಂದರ್ಭದಲ್ಲಿ ನಿಜವಾಗಿ ಗುರುವನ್ನು ವಂದಿಸಿದರೆ ಮಾತ್ರ ಆ ಪುಣ್ಯದಿಂದ ಭಾರತ ವಿಶ್ವಗುರುವಿನ ಸ್ಥಾನಕ್ಕೇರಲು ಬಹಳ ಬೇಗ ಸಾಧ್ಯವಾಗುತ್ತದೆ. ಗುರುವಿಗೆ ಶಿಷ್ಯರಾದವರು ವಂದನೆ ಸಲ್ಲಿಸಬೇಕು. ಅದು ಋಣ ಸಂದಾಯಕ್ಕಾಗಿ ಅಲ್ಲ. ಅಮ್ಮನ ಹಾಗೂ ಗುರುವಿನ ಋಣ ಸಂದಾಯ ಮಾಡಲು ಅಥವಾ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಅದಮಾರು ಮಠ ಉಡುಪಿ, ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ 35ನೇ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಿ ಮಾತನಾಡಿದರು.
ಉಚಿತಗಳು ಎಂದೂ ಸೂಕ್ತವಲ್ಲ
ಗುರುವಂದನೆ ಸ್ವೀಕರಿಸಿದ ಪಲಿಮಾರು ವಿದ್ಯಾಧೀಶ ಶ್ರೀ ಮಾತನಾಡಿ, ದೇಶ ಕಟ್ಟುವುದು ಎಂದರೆ ಸಿಮೆಂಟ್ನ ಕಟ್ಟಡ ಕಟ್ಟುವುದಲ್ಲ. ಸನಾತನ ಧರ್ಮ ಬೆಳೆಸುವುದೇ ದೇಶ ಕಟ್ಟುವ ಕಾರ್ಯವಾಗಿದೆ. ವೋಟಿಗೋಸ್ಕರ ಕಚ್ಚಾಡುವ ಇಂದಿನ ದಿನದಲ್ಲಿ ಸನಾತನ ಧರ್ಮ ಎತ್ತಿ ಹಿಡಿಯುವ ಕಾರ್ಯವಾಗಬೇಕಿದೆ. ಉಚಿತ ಎನ್ನುವುದೇ ಇಂದು ಉಚಿತವಾಗಿದೆ. ಸರ್ಕಾರ ಇಂದು ಅನೇಕ ‘ಫ್ರೀ’ಗಳ ಮೂಲಕ ಜನರನ್ನು ಬೇಡುವ ಸ್ಥಿತಿಯಲ್ಲಿಟ್ಟಿವೆ. ಜೀವನಕ್ಕಾಗಿ ದುಡಿದು, ಹಣ ಗಳಿಸಿ ಖರ್ಚು ಮಾಡುವುದೇ ನಿಜವಾದ ಧರ್ಮ. ಮೋದಿ-ಯೋಗಿಯಂತಹ ಸನಾತನ ಧರ್ಮದ ಸರ್ಕಾರ ಬಂದರೆ ಹಿಂದುಸ್ಥಾನಕ್ಕೆ, ನಮ್ಮ ಸಂಸ್ಕೃತಿಗೆ ಒಳಿತಾಗಲಿದೆ ಎಂದರು.
ಗುರುವೇ ಸರ್ವಸ್ವ

ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಹಿಂದು ಧಮೀರ್ಯರಿಗಷ್ಟೇ ಅಲ್ಲದೆ, ಬೇರೆ ಬೇರೆ ಧರ್ಮಗಳಿಗೂ ಸಹ ಸನಾತನ ಧರ್ಮದ ಶ್ರೇಷ್ಠತೆ ಹಾಗೂ ಚಿಂತನೆ ತಲುಪಿಸುವುದೇ ವಿಶ್ವಾರ್ಪಣಂ ಕಾರ್ಯಕ್ರಮದ ಉದ್ದೇಶ. ಭಗವದ್ ಚಿಂತನೆಯಿಂದ, ಅನುಸಂಧಾನದಿಂದ ದೈವತ್ವ ಲಭಿಸುತ್ತದೆ. ಸರ್ವಸ್ವವೂ ಆದ ಗುರುವಿನ ಮಾರ್ಗದರ್ಶನದಲ್ಲಿ ದೇಶ ಕಟ್ಟುವ ಕಾರ್ಯ ಮಾಡೋಣ ಎಂದರು.
ಸಾಧಕರಿಗೆ ಸನ್ಮಾನ
ಕುಮಟಾದ ಯಕ್ಷಗಾನ ಕಲಾವಿದ ಶ್ರೀಧರ್ ಮಹಾಬಲೇಶ್ವರ ಷಡಕ್ಷರಿ-ನರಹರಿ ತೀರ್ಥ ಯಕ್ಷಗಾನ ಪ್ರಶಸ್ತಿ, ಉಡುಪಿ ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್- ಸೇವಾ ರತ್ನಾಕರ ಪ್ರಶಸ್ತಿ, ಭದ್ರಾವತಿಯ ವೈದ್ಯ ಡಾ. ವಿನೀತ್ ಆನಂದ್- ಜೀವ ಸೇವಾರತ್ನ ಪ್ರಶಸ್ತಿ ಹಾಗೂ ಬೇಲೂರು ಉದ್ಯಮಿ ಮುರಳೀಧರ್ ಹತ್ವಾರ್- ಜನಹರಿ ಸೇವಾಸಕ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ ರಾಘವೇಂದ್ರ ರಾವ್ ಪಡುಬಿದ್ರಿ ಪ್ರಶಸ್ತಿ ಪತ್ರ ವಾಚಿಸಿದರು.
ಡೆಹರಾಡೂನ್ನ ಖ್ಯಾತ ಚಿಂತಕಿ ಮೀನಾಕ್ಷಿ ಸೆಹರಾವತ್ ಬಾಂಗ್ಲಾ-ಪಾಠ ಎಂಬ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾಧೀಶ ತೀರ್ಥರು ನಡೆದುಬಂದ ದಾರಿಯ ಕುರಿತು ಶೇಷಗಿರಿ ಕೆ.ಎಂ. ಉಪನ್ಯಾಸ ನೀಡಿದರು. ಶಾಸಕ ಯಶ್ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
ಖ್ಯಾತ ಗಾಯಕಿ ನಂದಿನಿ ಪುಣೆ ಪ್ರಾರ್ಥಿಸಿದರು. ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ಹಾಗೂ ಮಠದ ಮೆನೇಜರ್ ಗೋವಿಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಿಂತಕ ಶ್ರೀಕಾಂತ ಶೆಟ್ಟಿ ಪರಿಚಯಿಸಿದರು. ನಂದನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ತಂತ್ರಿ ವಂದಿಸಿದರು.
ಶತ-ಶತಮಾನ ಕಳೆದರೂ ನಶಿಸದು ಸನಾತನ ಧರ್ಮ
ತಲೆಗೆ ಎಣ್ಣೆ ಹಚ್ಚಿಕೊಂಡು, ಅಭ್ಯಂಗ ಸ್ನಾನ ಮಾಡಿ, ತಂದೆ-ತಾಯಿಯ ಕಾಲಿಗೆ ಎರಗಿದಾಗ ಹೊಸ ವರ್ಷಾಚರಣೆ ಆರಂಭವಾಯಿತೆಂದರ್ಥ. ಆದರೆ, ಈಗ ಹಾಗಲ್ಲ. ಹೊಟ್ಟೆಗೆ ಎಣ್ಣೆ ಹಾಕಿಕೊಂಡು, ರಸ್ತೆಯಿಡೀ ತೇಲಾಡುತ್ತ, ಎಲ್ಲೆಲ್ಲಿಯೋ ಬಿದ್ದು, ಹೊರಳಾಡುತ್ತ ಮಲಗಿದರೆ ಅದು ಹೊಸ ವರ್ಷಾಚರಣೆ. ಈ ಸಂಸ್ಕೃತಿಯಿಂದ ಅಪ್ಪ-ಅಮ್ಮನಿಗೆ ವರಿ, ಜನ-ವರಿ ಆಗಿದೆ. ಇದರಿಂದ ಯಾರೂ ಚಿಂತಿಸಬೇಕಿಲ್ಲ. 21ನೇ ಶತಮಾನವಲ್ಲ, 51ನೇ ಶತಮಾನ ಕಳೆದು ಶತ-ಶತಮಾನಗಳೇ ಉರುಳಿದರೂ ಭಾರತೀಯ ಸನಾತನ ಧರ್ಮ, ಸಂಸ್ಕೃತಿ ಎಂದಿಗೂ ನಶಿಸಿದು ಎಂದು ಅದಮಾರು ವಿಶ್ವಪ್ರಿಯ ಶ್ರೀ ನುಡಿದರು.
ದೇಶ, ದೇಹ, ದೇವ ಎಂಬ ತ್ರಿ ಡಿ ಮೂಲಕ ನಾವುಗಳೆಲ್ಲ ಸಾಧನೆ ಮಾಡಬೇಕು. ಈ ಸಾಧನೆ ಮಾಡಲು ಭಗವಂತನ ಕೃಪೆಯಿಂದ ಜ್ಞಾನ ಹೊಂದಬೇಕು. ನೇರವಾಗಿ ಭಗವಂತನನ್ನು ಹೊಂದಲು ಅಸಾಧ್ಯ. ಜಿಪಿಎಸ್ ಮಾರ್ಗದ ಮೂಲಕ ದೇವರ ಬಳಿ ಹೋಗಲು ಸಾಧ್ಯವಿಲ್ಲ. ಆದರೆ, ಗುರುವೆಂಬ ಜಿಪಿಎಸ್ ಮೂಲಕ ದೇವರನ್ನು ಕಾಣಲು ಸಾಧ್ಯ.
| ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು. ಪಲಿಮಾರು ಕಿರಿಯ ಶ್ರೀ