ಹೊನ್ನಾಳಿ: ಮಗುವಿಗೆ ತಾಯಿ ಜನ್ಮ ನೀಡಿದರೂ ಆ ಮಗುವಿಗೆ ಶಿಕ್ಷಣ, ಸಂಸ್ಕಾರ ನೀಡಿ ದೇಶದ ಅತ್ಯಮೂಲ್ಯ ಆಸ್ತಿಯನ್ನಾಗಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಕರಿಬಸಪ್ಪ ಹೇಳಿದರು.
ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು ತಾಲೂಕಿನ ಎಚ್. ಗೋಪಗೊಂಡನಹಳ್ಳಿಯ ಶಾಲಾ ಅವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ಒಬ್ಬ ವಿದ್ಯಾರ್ಥಿ ಓದಿ ಎಷ್ಟೇ ದೊಡ್ಡ ಮನುಷ್ಯನಾದರೂ ತಾನು ಓದಿದ ಪ್ರಾಥಮಿಕ, ಪ್ರೌಢಶಾಲೆಗಳು, ಶಿಕ್ಷಕರನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಗಂಡುಗಲಿ ಮಾತನಾಡಿ,ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯದೆ ಗುರುವಂದನಾ ಕಾರ್ಯಕ್ರಮದ ಮೂಲಕ ಅವರಿಗೆ ಗೌರವಿಸುತ್ತಿರುವುದು ಶ್ಲಾಘನೀಯ. ಇದಕ್ಕಿಂತ ದೊಡ್ಡ ಗುರು ಕಾಣಿಕೆ ಬೇರೊಂದಿಲ್ಲ ಎಂದು ಹೇಳಿದರು.
ಮುಖ್ಯಶಿಕ್ಷಕ ಮಲ್ಲಪ್ಪ ಮಾತನಾಡಿ, ಜೈವಿಕ ಸಂಬಂಧವಿಲ್ಲದಿದ್ದರೂ ತಂದೆ ತಾಯಿ ನಂತರ ಅವರಷ್ಟೆ ಪ್ರೀತಿ, ಜವಾಬ್ದಾರಿ ತೋರಿಸುವವರು ಗುರುಗಳು ಮಾತ್ರ ಎಂದು ಹೇಳಿದರು.
ಗುರುಬಸಪ್ಪ, ಗಂಗನಗೌಡ, ಎಚ್.ಬಿ.ವೀರಪ್ಪ, ಕರಿಬಸಪ್ಪ, ಫಾಲಾಕ್ಷಪ್ಪ ಮಾತನಾಡಿದರು. ಶಿಕ್ಷಕರಾದ ತೇಜಮೂರ್ತಿ, ಅರುಣ್‌ಕುಮಾರ, ಮಲ್ಲಪ್ಪ ಬಾಳೇಕಾಯಿ, ಕುಬೇರಗೌಡ, ಕವಿತಾ ಪಾಟೀಲ್, ಸಾಕಮ್ಮ, ನಾಗರಾಜ ಅಳವಂಡಿ, ಸಿದ್ದಪ್ಪ ಇದ್ದರು.
ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಕರ್ತವ್ಯ ನಿರ್ವಹಿಸಿ ಬೇರೆಡೆ ವರ್ಗಾವಣೆಯಾದ 30ಕ್ಕೂ ಹೆಚ್ಚು ಶಿಕ್ಷಕರನ್ನು ಹಳೇ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು.