ಶಿರ್ವ: ವಿದ್ಯಾಧಿದೇವತೆ ಗಣಪತಿ ಸಾನ್ನಿಧ್ಯದಲ್ಲಿ ಐವತ್ತರ ಹರೆಯದಲ್ಲಿಯೂ ತಮ್ಮ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಗುರುಗಳನ್ನು ಸ್ಮರಿಸಿ ಅವರ ಇಳಿವಯಸ್ಸಿನಲ್ಲಿ ಒಂದೇ ವೇದಿಕೆಯಲ್ಲಿ ಕುಳ್ಳಿರಿಸಿ ಗೌರವಿಸಿದ್ದು, ಅದ್ಭುತ ಗುರುಶಿಷ್ಯರ ಸಂಗಮಕ್ಕೆ ಸಾಕ್ಷಿ ಎಂದು ಉಡುಪಿ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಕರಂಬಳ್ಳಿ ಭಾಗ್ಯಶ್ರೀ ಐತಾಳ್ ಹೇಳಿದರು.
ಪೇಟೆಯ ಕೇಂದ್ರಭಾಗದಲ್ಲಿ ಜರುಗುತ್ತಿರುವ 20ರ ಸಂಭ್ರಮದ ಹತ್ತು ದಿನಗಳ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸೋಮವಾರ ಶಿಷ್ಯರಿಗೆ – 50 ಸವಿನೆನಪಿನಲ್ಲಿ ಬಾಲ್ಯದಲ್ಲಿ ಪಾಠ ಕಲಿಸಿದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದು ಗುರುಗಳಿಂದ ಪಾಠ ಕಲಿತ ವಿದ್ಯಾರ್ಥಿಗಳು ಇಂದು ತಮ್ಮ 50ರ ಹರೆಯದಲ್ಲಿ ಜತೆಗೂಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷ 50ರ ಹರೆಯದ ಮಾಧವ ಕಾಮತ್‌ರವರ ನೇತೃತ್ವದಲ್ಲಿ ಅಂದಿನ ಎಲ್ಲ ಗುರುಗಳನ್ನು ಸನ್ಮಾನಿಸಲಾಯಿತು.
ಸಮಿತಿ ಗೌರವ ಅಧ್ಯಕ್ಷ ಶಂಕರ ನಾಯಕ್ ಬಂಟಕಲ್ಲು ಸ್ವಾಗತಿಸಿ, ಶ್ರೀನಿಧಿ ದೇವಾಡಿಗ ಪ್ರಾರ್ಥಿಸಿದರು. ಮಾಧವ ಆಚಾರ್ಯ ಹೇರೂರು ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ದಿನೇಶ ದೇವಾಡಿಗ ವಂದಿಸಿದರು. ನಂತರ ಮಿತ್ರ ಬಳಗ ಹೇರೂರು ಇವರಿಂದ ರವಿಕುಮಾರ್ ಕಡೆಕಾರ್ ವಿರಚಿತ ಕಡಲ್ ಸೇರಂದಿ ಸುದೆ ತುಳು ನಾಟಕ ಪ್ರದರ್ಶನಗೊಂಡಿತು.
ಸನ್ಮಾನ
ಹಿರಿಯ ಶಿಕ್ಷಕಿಯರಾದ ಲೀಲಾವತಿ ಎಂ.ಬಂಟಕಲ್ಲು, ಜಯಂತಿ ಬಾ ಪಿಲಾರು, ಅನಸೂಯಾ ಬಾ ಕೆ.ಕಳತ್ತೂರು, ಹಿಲ್ಡಾ ಸಲ್ಡಾನ್ಹಾ ಪಾಂಬೂರು, ಶಿಕ್ಷಕರಾದ ಬಿ.ಪುಂಡಲೀಕ ಮರಾಠೆ, ಸುಬ್ರಹ್ಮಣ್ಯ ನಾಯಕ್ ಪುನಾರು, ದಿ.ಅನಂತರಾಮ ಭಟ್ ಪರವಾಗಿ ಶ್ರೀಕಾಂತ್ ಭಟ್, ದಿ.ಶಂಕರನಾರಾಯಣ ರಾವ್ ಪರವಾಗಿ ರಾಘವೇಂದ್ರ ಸ್ವಾಮಿ, ದಿ.ಶಂಕರ ಬಿ.ಪರವಾಗಿ ಅವರ ಪತ್ನಿ ಲಕ್ಷ್ಮೀ ಗೌರವ ಸ್ವೀಕರಿಸಿದರು.