ಗುರುಗುಂಟಾ ಸರ್ಕಾರಿ ಶಾಲೆಯಲ್ಲಿ ಅಕ್ರಮ ಚಟುವಟಿಕೆ

21 Gurgunta 1
ಗುರುಗುಂಟಾ ಸರ್ಕಾರಿ ಶಾಲೆಯ ಕೆಳಮಹಡಿಯಲ್ಲಿ ಬಾಟಲಿಗಳ ಚೂರುಗಳನ್ನು ಬಿದ್ದಿರುವುದು.
Published on

ಗುರುಗುಂಟಾ: ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿರುವ ಸರ್ಕಾರಿ ಮಾಹಿಪ್ರಾ ಶಾಲಾ ಕಟ್ಟಡ ಮದ್ಯವ್ಯಸನಿ ಹಾಗೂ ಅಕ್ರಮ ದಂಧೆಗಳ ತಾಣವಾಗಿದ್ದು, ವಿದ್ಯಾರ್ಥಿಗಳು-ಶಿಕ್ಷಕರಿಗೆ ಕಿರಿಕಿರಿಯಾಗಿದೆ.

ಸಂಜೆಯಾದರೆ ಸಾಕು ಪಡ್ಡೆ ಹುಡುಗರು ಶಾಲಾ ಆವರಣಕ್ಕೆ ಬಂದು ಕಂಠಪೂರ್ತಿ ಕುಡಿಯುತ್ತಾರೆ. ನಶೆಯಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಹಾಕುತ್ತಿದ್ದು, ಗಾಜಿನ ಚೂರುಗಳು ಆವರಣದಲ್ಲಿ ಹರಡುತ್ತಿವೆ. ಸೇದಿಬಿಟ್ಟ ಸಿಗರೇಟ್ ತುಂಡು, ಆಹಾರ ಪದಾರ್ಥಗಳ ಪೊಟ್ಟಣ, ಮದ್ಯದ ಬಾಟಲಿಗಳ ಚೂರುಗಳು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಶಾಲೆಯ ಅಂದ ಹದಗೆಡುತ್ತಿದೆ. ಶಾಲೆಯ ಗೋಡೆ, ನೆಲಹಾಸುಗಳಿಗೆ ಗುಟ್ಖಾ ತಿಂದು ಉಗುಳಿದ ಕಲೆಗಳು ಅಸಹ್ಯ ತರಿಸುತ್ತಿದೆ.

ಇದೇ ಶಾಲಾ ಆವರಣದಲ್ಲಿ ಉರ್ದುಶಾಲೆ, ಪ್ರಾಥಮಿಕ ಶಾಲೆ, ಜೂನಿಯರ್ ಕಾಲೇಜಗಳಿದ್ದು, ವಿದ್ಯಾರ್ಥಿ, ಶಿಕ್ಷಕ, ಸಿಬ್ಬಂದಿ ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಇದೆ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕುಡುಕರ ವಕ್ರದೃಷ್ಟಿಗೆ ಮಕ್ಕಳ ಕುಡಿಯುವ ನೀರಿನ ಸಾಲು ನಳಗಳು, ವಿದ್ಯಾರ್ಥಿನಿಯರ ಶೌಚಗೃಹಗಳ ಬಾಗಿಲುಗಳು ಧ್ವಂಸಗೊಂಡಿವೆ. ಈ ಶಾಲಾ ಆವರಣ ಪ್ರವೇಶಿಸಲು ಎರಡು ಮಾರ್ಗಗಳಿದ್ದು, ಸಿಸಿ ಕ್ಯಾಮರಾ ಅಳವಡಿಸಲು ಜನರು ಆಗ್ರಹಿಸಿದ್ದಾರೆ.

ಸರ್ಕಾರಿ ಮಾಹಿಪ್ರಾ ಶಾಲೆ ಮುಖ್ಯಶಿಕ್ಷಕನಾಗೇಶಬೆಳಗ್ಗೆ ಶಾಲೆಗೆ ಬಂದು ನೋಡಿದರೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಚೂರುಗಳು ಬಿದ್ದಿರುತ್ತವೆ. ಅವುಗಳನ್ನು ತೆಗೆಯುವುದೇ ಶಿಕ್ಷಕ-ಸಿಬ್ಬಂದಿಗೆ ನಿತ್ಯ ಕಾಯಕವಾಗಿದೆ. ಕಡಿವಾಣಕ್ಕಾಗಿ ವರ್ಷದ ಹಿಂದೆ ಪೊಲೀಸರಿಗೆ ಮೌಖಿಕವಾಗಿ ತಿಳಿಸಲಾಗಿತ್ತು. ಅದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಸಿಸಿ ಕ್ಯಾಮರಾ ಅಳವಡಿಸುತ್ತಿದ್ದೇವೆ. ಉರ್ದು ಶಾಲೆ ಮುಂದೆ ಅಳವಡಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿಗಳು ವೀಕ್ಷಿಸಿದರೆ ರಾತ್ರಿ ವೇಳೆಯಲ್ಲಿ ಬರುವವರ ಚಿತ್ರಣ ಬಯಲಾಗಲಿದೆ.

ಎಎಸ್‌ಐ, ಉಪ ಪೊಲೀಸ್‌ಠಾಣೆ, ಗುರುಗುಂಟಾ

ರಮೇಶ್

ಸಿಬ್ಬಂದಿ ಕೊರತೆ ಮಧ್ಯೆಯೂ ರಾತ್ರಿಪೂರ್ತಿ ಗಸ್ತು ಮಾಡುತ್ತೇವೆ. ಸರ್ಕಾರಿ ಪ್ರೌಢ ಶಾಲಾ ಆವರಣಕ್ಕೂ ಹೋಗುತ್ತೇವೆ. ಮಧ್ಯರಾತ್ರಿ ಅಂತಹ ಚಟುವಟಿಕೆಗಳು ಕಂಡುಬಂದಿಲ್ಲ. ಶಾಲಾ ಮುಖ್ಯಸ್ಥರ ದೂರು ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net