

ವಿಜಯವಾಣಿ ಸುದ್ದಿಜಾಲ ಉಡುಪಿ
ಶಿಕ್ಷಕರು ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಾರೆ. ಅವರ ಸೇವೆ ನಿರಂತರವಾಗಿ ಸಮಾಜಕ್ಕೆ ಲಭಿಸಿದಾಗ ನಿಷ್ಠಾವಂತ, ಪ್ರಾಮಾಣಿಕ ಸಮಾಜ ನಿರ್ಮಾಣವಾಗಲು ಸಾಧ್ಯ. ಮಕ್ಕಳಿಗೆ ಪಾಠ ಮಾಡುವ ಗುರುಗಳು ಸಾಕ್ಷಾತ್ ದೇವರ ಸ್ವರೂಪ ಎಂದು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ ಹೆಗ್ಡೆ ಆತ್ರಾಡಿ ಅಭಿಪ್ರಾಯಪಟ್ಟರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರ ವಿಶೇಷತೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ರಕ್ಷಕ-ಶಿಕ್ಷಕ ಸಂಘದ ಕೋಶಾಧಿಕಾರಿ ವೈಷ್ಣವಿ ಕಾಮತ, ಸಂಘದ ಸದಸ್ಯರಾದ ರತ್ನಾಕರ ದೇವಾಡಿಗ, ಸಂತೋಷ ಸಗ್ರಿ, ವಂದನಾ ಎಲ್. ಕಾಮತ, ಉಷಾ ರಾವ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ಶಿಕ್ಷಕರು ಹಾಗೂ ಶಿಕ್ಷಕೇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸೂರಜ್ ಎನ್.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಶರಣ್ಯಾ ವಂದಿಸಿದರು. ವಿದ್ಯಾರ್ಥಿನಿ ವರ್ಣಿತಾ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ವಿದ್ಯಾರ್ಥಿನಿಯರು ನೃತ್ಯದ ಮೂಲಕ ಶಿಕ್ಷಕರು ಹಾಗೂ ಗಣ್ಯರನ್ನು ಸ್ವಾಗತಿಸಿದರು. ತಮ್ಮ ಶಿಕ್ಷಕರಿಗೇ ವಿವಿಧ ಆಟ ಆಡಿಸಿದ ಮಕ್ಕಳು ಸಂತಸಪಟ್ಟರು. ಫ್ಲಿಪ್ ದಿ ಕಾಯಿನ್, ಬಲೂನಿನ ಮೇಲೆ ಅಕ್ಷರ ಸ್ಪರ್ಧೆ, ಸಂಗೀತದ ಆಟ, ಸಮೂಹದ ಆಟಗಳನ್ನು ಆಡಿಸಿ, ಗೆಲುವು ಸಾಧಿಸಿದ ಶಿಕ್ಷಕರಿಗೆ ಬಹುಮಾನವನ್ನೂ ವಿತರಿಸಿ ಶಿಕ್ಷಕರ ದಿನಾಚರಣೆ ಆಚರಿಸಿದರು. ಗುರುಗಳನ್ನು ಸನ್ಮಾನಿಸಿ ಖುಷಿಪಟ್ಟರು.