

ಬೆಳಗಾವಿ : ನೆಮ್ಮದಿಯ ಜೀವನಕ್ಕಾಗಿ ಒಳ್ಳೆಯ ದಾರಿ ಮಾತ್ರವಲ್ಲಿ ದೇವರಿದ್ದಾನೆ ಎಂಬ ಭಕ್ತಿ ಮಾರ್ಗವನ್ನೂ ಗುರು ತೋರಿಸುತ್ತಾನೆ. ಹೀಗಾಗಿ ದೇವರಗಿಂತಲೂ ಗುರುವೇ ಶ್ರೇಷ್ಠ. ಗುರುವಿನ ಮೇಲೆ ಶ್ರದ್ಧಾ, ಭಕ್ತಿಯನ್ನಿಟ್ಟು ಕಲಿತ ವಿದ್ಯಾರ್ಥಿಯ ಜೀವನ ಸಾರ್ಥಕವಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ವ್ಯವಸ್ಥಾಪಕ, ಗಾಯಕ ಮುಕುಂದ ಗೋರೆ ಹೇಳಿದರು.
ಇಲ್ಲಿನ ಗುರುಪ್ರಸಾದ ನಗರದ ಸಪ್ತಸ್ವರ ಸಂಗೀತ ಮಹಾವಿದ್ಯಾಲದದ ವತಿಯಿಂದ ಐಎಂಇಆರ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಸಾಗರಕ್ಕಿಂತಲೂ ದೊಡ್ಡದು. ಗುರುಮುಖೇನ ಕಲಿತ ಸಂಗೀತ ಮಾತ್ರ ಕೊನೆವರೆಗೂ ಉಳಿಯಲು ಸಾಧ್ಯ. ಪ್ರತಿಯೊಂದು ಸ್ವರವನ್ನೂ ಹೇಗೆ ಹೇಳಬೇಕು, ಹಾಡಬೆಕು ಎಂಬುದನ್ನು ಗುರು ಮಾತ್ರ ಹೇಳಿಕೊಡಲು ಸಾಧ್ಯ. ಸಂಗೀತಕ್ಕೆ ಸತತಾಭ್ಯಾಸ ಬೇಕು ಎಂದು ಹೇಳಿದರು.
ಸಪ್ತಸ್ವರ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಪ್ರಕಾಶ ಮಾತನಾಡಿ, ಸಪ್ತಸ್ವರ ಸಂಗೀತ ಮಹಾವಿದ್ಯಾಲಯದಲ್ಲಿ ಗಾಯನ, ನೃತ್ಯ, ವಾದನ ಹೀಗೆ ಎಲ್ಲವನ್ನು ಈ ವಿದ್ಯಾಲಯದಲ್ಲಿ ಹೇಳಿಕೊಡುತ್ತಿದ್ದು, ಸಂಗೀತ ಅಭ್ಯಾಸಕ್ಕೆ ಪಾಲಕರ ಸಹಕಾರ ಅತ್ಯವಶ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಪ್ತಸ್ವರ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಂಗೀತ, ಭರತನಾಟ್ಯ, ಕಥಕ್, ತಬಲಾ, ಹಾರ್ಮೋನಿಯಂ ಪ್ರತಿಭಾ ಪ್ರದರ್ಶನ ನಡೆಯಿತು. ವಾಮನ ವಾಗೂಕರ ಹಾರ್ಮೋನಿಯಮ್ ಹಾಗೂ ಜಿತೇಂದ್ರ ತಬಲಾ ಸಾಥ್ ನೀಡಿದರು. ಪ್ರಕಾಶ ಅಯ್ಯರ, ಸುಮೇಧಾ ಅಗಸೆ, ಶೇಫಾಲಿ ಕ್ಷೀರಸಾಗರ, ಪೂರ್ವಿ ರಾಜಪುರೋಹಿತ, ನಾರಾಯಣ ಗಣಾಚಾರಿ, ನಿರ್ಮಲಾ ಪ್ರಕಾಶ, ನಿರಂಜನ ಮೂರ್ತಿ ಇತರರಿದ್ದರು. ವರ್ಷಾ ದೊಡವಾಡ ನಿರೂಪಿಸಿದರು. ಸೃಷ್ಠಿ ಬಾಗೇವಾಡಿ ವಂದಿಸಿದರು.