ಸಮಸ್ಯೆಗಳ ಕೂಪ ಗುಂಡೂರು ಡ್ಯಾಂ

dam
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ ಬೈಂದೂರು ವ್ಯಾಪ್ತಿಯ ಆಲೂರು ಗ್ರಾಮದಲ್ಲಿರುವ ವಾರಾಹಿ ನೀರಾವರಿ ಯೋಜನೆಯ ಗುಂಡೂರು ಕಿಂಡಿ ಅಣೆಕಟ್ಟು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಡ್ಯಾಂನ ಯಾಂತ್ರೀಕೃತ ಗೇಟ್, ರ‌್ಯಾಂಪ್, ಮೇಲ್ಮಾಡಿಗೆ ತುಕ್ಕುಹಿಡಿದಿದ್ದು, ಕಿಂಡಿಯಲ್ಲಿ ಬೃಹತ್ ಗಾತ್ರದ ಮರ ಮಟ್ಟುಗಳು ತುಂಬಿಕೊಂಡಿವೆ. ಅಣೆಕಟ್ಟಿನ ಒಂದೇ ಭಾಗದಲ್ಲಿ ನೀರು ಸಂಗ್ರಹಗೊಂಡಿದ್ದು, ಈ ಕಾರಣದಿಂದ ಮರದ ಮಟ್ಟುಗಳು ತುಂಬಿ ನೀರಿನ ಹರಿವಿಗೆ ಅಡಣೆಯಾಗಿದೆ. ಬೈಂದೂರು ತಾಲೂಕಿನ ಕಾಲ್ತೋಡು, ಹೇರಂಜಾಲು ಹಾಗೂ ಕುಂದಾಪುರ ತಾಲೂಕಿನ ಆಲೂರು ಮತ್ತು ಸೇನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಿನ ಸಮಸ್ಯೆ ಎದುರಾಗಿದೆ. ನೀರಿನಲ್ಲಿ ತೇಲಿ ಬರುತ್ತಿರುವ ಮರ ಮಟ್ಟುಗಳ ಹೊಡೆತಕ್ಕೆ ಯಾಂತ್ರೀಕೃತ ಗೇಟ್ ಅಲ್ಲಲ್ಲಿ ಜಖಂಗೊಂಡಿದೆ. ಕಬ್ಬಿಣದ ಮೇಲ್ಮಾಡು, ಗೇಟನ್ನು ಎತ್ತುವ ಮೇಲ್ಗಡೆ ಯಂತ್ರಗಳು, ಡ್ಯಾಂನ ಬಲಭಾಗದಲ್ಲಿರುವ ಕಬ್ಬಿಣದ ರ‌್ಯಾಂಪ್ ಸಹಿತ ಪ್ರತಿಯೊಂದು ಸಲಕರಣೆಗಳು ತುಕ್ಕು ಹಿಡಿದಿದ್ದು, ಡ್ಯಾಂನ ನಿರ್ವಹಣೆಗಾಗಿ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಸಿಬ್ಬಂದಿ ವಸತಿಗೃಹ ಪಾಳುಬಿದ್ದ ಭೂತಬಂಗಲೆಯಂತಾಗಿದೆ. ನೀರಾವರಿ ಉದ್ದೇಶಕ್ಕೆ ನಿರ್ಮಾಣಗೊಂಡ ಗುಂಡೂರು ಡ್ಯಾಂ ಪ್ರಯೋಜನಕ್ಕಿಲ್ಲದಂತಾಗಿದೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ನೀರು ಸಂಗ್ರಹಣಾ ಸಾಮರ್ಥ್ಯ

ಸುಮಾರು 89.98 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಗುಂಡೂರು ಡ್ಯಾಂ 0.33 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಬೈಂದೂರು ವ್ಯಾಪ್ತಿಯ ಆಲೂರು, ಕಾಲ್ತೋಡು, ಹೇರಂಜಾಲು, ಸೇನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 1,730 ಹೆಕ್ಟೇರ್ (4500 ಎಕರೆ) ಕೃಷಿ ಭೂಮಿಗೆ ನೀರುಣಿಸುವುದಕ್ಕಾಗಿ ಏಳು ಬೃಹತ್ ಕಿಂಡಿಗಳನ್ನು ಹೊಂದಿರುವ ಅಣೆಕಟ್ಟಿನಲ್ಲಿ ಸ್ವಯಂಚಾಲಿತ ಯಂತ್ರಗಳಿದ್ದು, ನಿತ್ಯವೂ ಹತ್ತು ಮೀಟರ್ ಎತ್ತರಕ್ಕೆ ನೀರು ಸಂಗ್ರಹವಿರುತ್ತದೆ.

ನೀರಾವರಿ ಉದ್ದೇಶಕ್ಕೆ ನಿರ್ಮಾಣಗೊಂಡ ಗುಂಡೂರು ಡ್ಯಾಂ ಪ್ರಯೋಜನಕ್ಕಿಲ್ಲದಂತಾಗಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದೆ ಹಾಗೂ ಕೃಷಿ ಭೂಮಿಗೆ ನೀರಿನ ಕೊರತೆಯಾಗಿದೆ. ಡ್ಯಾಂನ ಯಾಂತ್ರೀಕೃತ ಗೇಟ್, ರ‌್ಯಾಂಪ್, ಮೇಲ್ಮಾಡಿ ತುಕ್ಕುಹಿಡಿದಿದ್ದು, ಕಿಂಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಮರ ಮಟ್ಟುಗಳು ತುಂಬಿಕೊಂಡಿದೆ -ದಿನಕರ ಶೆಟ್ಟಿ ಸ್ಥಳೀಯ ನಿವಾಸಿ ಗುಂಡೂರು ಡ್ಯಾಂ ನಿರ್ವಹಣೆ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಇನ್ನೊಂದು ವಾರದೊಳಗೆ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ರೈತರೊಂದಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. -ಗುರುರಾಜ್ ಗಂಟಿಹೊಳೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net