ಟಿಕ್​ಟಾಕ್ ಕ್ರೇಜ್ ಇದೆಯಾ?: ಗುಜರಾತ್​ನ ಸಲ್ಮಾನ್ ಮತ್ತು ಆರೀಫ್​ ಮಾಡಿಕೊಂಡ ಅವಾಂತರ ಇದು..

tiktok 6 JUN 20
Published on

ವಡೋದರಾ: ಟಿಕ್​ಟಾಕ್ ವಿಡಿಯೋ ಕ್ರೇಜ್​ ಸಮಾಜದ ಬಹುತೇಕ ಜನರನ್ನಾವರಿಸಿದೆ. ಏನೋ ಮಾಡಿ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿಬಿಡಬೇಕೆಂಬ ಹಂಬಲ, ಬಯಕೆ. ಹೀಗೆ ಬಯಸಿದ್ದ ಇಬ್ಬರು ಸೂಕ್ಷ್ಮ ಮರೆತು ಮಾಡಿದ ಅವಾಂತರಕ್ಕೆ ಈಗ ಪ್ರತಿಫಲ ಉಣ್ಣುತ್ತಿದ್ದಾರೆ. ಅಂತಹ ಅವಾಂತರ ಅವರೇನು ಮಾಡಿದ್ರು ಅಂತೀರಾ?

ಆರೋಪಿಗಳ ಹೆಸರು ಸಲ್ಮಾನ್ ಪಠಾಣ್​ ಮತ್ತು ಆರೀಫ್ ಶೇಖ್​. ಲಾಕ್​ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಇಬ್ಬರನ್ನೂ ಸಯಾಜಿಗಂಜ್​ ಪೊಲೀಸರು ಬಂಧಿಸಿ ಸೆರೆಗೆ ದಬ್ಬಿದ್ದರು. ಇದಾಗಿದ್ದು ಏಪ್ರಿಲ್​ 16ರಂದು. ಅಂದೇ ಅವರ ಪರ ವಕೀಲರು ಜಾಮೀನು ತಂದು ಬಿಡಿಸಿಕೊಂಡು ಹೋಗಿದ್ದರು. ಅದೇ ದಿನ ಈ ಆರೋಪಿಗಳು ಪೊಲೀಸ್ ಠಾಣೆಯಿಂದ ಬಿಡುಗಡೆ ಹೊಂದುವ ಸಮಯದಲ್ಲಿ ಠಾಣೆಯ ಒಳಾಂಗಣದ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡಿದ್ದರು. ಈ ಚಿತ್ರೀಕರಣ ನಡೆಸುವುದಕ್ಕೆ ಅವರು ಯಾರ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಸಬ್​ ಇನ್​ಸ್ಪೆಕ್ಟರ್​ ಎಸ್​ಜಿ ಸೋಲಂಕಿ ಹೇಳಿದ್ದಾರೆ.

ಈ ವಿಡಿಯೋವನ್ನು ಬಳಸಿಕೊಂಡ ಆರೋಪಿಗಳು ಅದಕ್ಕೆ ಪೊಲೀಸ್ ಸೈರನ್ ಸೇರಿಸಿ ಎಡಿಟ್ ಮಾಡಿಕೊಂಡು ಟಿಕ್​ಟಾಕ್​ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಆರೋಪಿಗಳಲ್ಲೊಬ್ಬ ಠಾಣೆಯೊಳಗೆ ಸ್ಟೇರ್​ಕೇಸ್​ ಮೇಲೆ ಕುಳಿತು ಶೂಗಳನ್ನು ಧರಿಸುತ್ತಿರುವ ದೃಶ್ಯವಿದೆ. ಜಾಮೀನು ಪಡೆದು ಠಾಣೆಯಿಂದ ಹೊರಗೆ ಹೋಗುವ ಮುನ್ನ ಚಿತ್ರೀಕರಿಸಿದ ದೃಶ್ಯವಿದು. ಇದನ್ನು ಫಿಲ್ಮಿ ಸ್ಟೈಲ್​ನಲ್ಲಿ ಎಡಿಟ್ ಮಾಡಿಕೊಂಡು ನಂತರ ಟಿಕ್​ಟಾಕ್​ಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂತು.

ಟಿಕ್​ಟಾಕ್ ವಿಡಿಯೋ ಅಪ್ಲೋಡ್ ಮಾಡಿದ ಈ ಆರೋಪಿಗಳ ವಿರುದ್ಧ ಅನುಮತಿ ಪಡೆಯದೇ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯ ಸೆಕ್ಷನ್​ 66(ಇ) ಪ್ರಕಾರ ಉಲ್ಲಂಘನೆಯ ಪ್ರಕರಣವನ್ನು ಪೊಲೀಸರು ಕೂಡಲೇ ದಾಖಲಿಸಿದ್ದಾರೆ. ಇದಲ್ಲದೆ, ಐಪಿಸಿ ಸೆಕ್ಷನ್​ 269, 270ರ ಪ್ರಕಾರವೂ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net