ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಕಥೆ ಕಟ್ಟಿದ ಗುಜರಾತ್ ಉದ್ಯಮಿ; ಬೆಂಗಳೂರಿನಲ್ಲಿ ಉಬರ್ ಚಾಲಕ| Fake Suicide

ವಿಜಯವಾಣಿ (67)
Published on

Palakkad: ಕೇರಳದ ಪಾಲಕ್ಕಾಡ್​ನ ನದಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ(Fake Suicide) ಮನೆಯವರಿಗೆ ಕಥೆ ಕಟ್ಟಿದ್ದ ಗುಜರಾತ್ ಮೂಲದ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಉಬರ್ ಚಾಲಕನಾಗಿ ಕೆಲಸ ಮಾಡುವಾಗ ಕೇರಳ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಉದ್ಯಮಿಯನ್ನು ಹುನಾನಿ ಸಿರಾಜ್ ಅಹ್ಮದ್ ಭಾಯ್ ಎಂದು ಗುರುತಿಸಲಾಗಿದೆ. ಈತನು ರಬ್ಬರ್ ಬ್ಯಾಂಡ್​ ವ್ಯಾಪಾರ ಮಾಡ್ತಿದ್ದ ಉದ್ಯಮಿ ಎನ್ನಲಾಗಿದೆ. ಸೆ. 17 ರಂದು ರಬ್ಬರ್ ಬ್ಯಾಂಡ್‌ಗಳಿಗೆ ಸಂಬಂಧಿಸಿದ ವ್ಯವಹಾರ ಒಪ್ಪಂದಕ್ಕಾಗಿ ಪಾಲಕ್ಕಾಡ್‌ನ ಶೋರನೂರ್‌ಗೆ ಬಂದಿದ್ದಾನೆ.

ಈ ವೇಳೆ ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿ ಸುಮಾರು 50 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಅದನ್ನು ತೀರಿಸಲಾಗದಕ್ಕೆ ಆತ್ಮಹತ್ಯೆಯ ಕಥೆ ಕಟ್ಟಲು ನಿರ್ಧರಿಸಿದ್ದಾನೆ. ಪಾಲಕ್ಕಾಡ್‌ನ ಚೆರುತುರುತಿ ಸೇತುವೆಯಿಂದ ಭಾರತಪುಳ ನದಿಯ ಫೋಟೋ ತೆಗೆದು ತನ್ನ ಹೆಂಡತಿಗೆ ಕಳುಹಿಸಿ, ತಾನು ಜಿಗಿಯಲಿದ್ದೇನೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಕುರಿತ ಸಿರಾಜ್ ಕುಟುಂಬಸ್ಥರ ದೂರಿನ ಮೇರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡು ಕೇರಳ ಪೊಲೀಸರು ಅಗ್ನಿಶಾಮಕ ದಳ, ಚೆರುತುರುತಿ ನಿಲಾ ಬೋಟ್ ಕ್ಲಬ್ ಹಾಗೂ ಸ್ಥಳೀಯ ರಕ್ಷಣಾ ತಂಡಗಳ ಸಹಾಯದಿಂದ ನದಿಯಲ್ಲಿ ಮೂರು ದಿನಗಳ ಕಾಲ ತೀವ್ರ ಶೋಧ ನಡೆಸಿದ್ದಾರೆ.

ಯಾವುದೇ ಶವ ಪತ್ತೆಯಾಗದ ಹಿನ್ನೆಲೆ ಅನುಮಾನ ಗೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದು, ಆತ್ಮಹತ್ಯೆ ಮಾಡಿಕೊಂಡಂತೆ ನಟಿಸಿದ್ದ ಸಿರಾಜ್​ನನ್ನು ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ಬಂಧಿಸಿದ್ದಾರೆ. ಈ ವೇಳೆ ಆತನು ಉಬರ್ ಚಾಲಕನಾಗಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.

ವಿಚಾರಣೆಯ ಸಮಯದಲ್ಲಿ ಸಾಲಗಾರರನ್ನು ಎದುರಿಸುವ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಕಳುಹಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net