ಲೋಕಸಮರ: ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್!

bjp
Published on

ಸೂರತ್: ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ ಹಾಗೂ ಎಂಟು ಅಭ್ಯರ್ಥಿಗಳು ಚುನಾವಣಾ ಅಖಾಡದಿಂದ ಹಿಂದೆ ಸರಿದ ಕಾರಣದಿಂದ ಗುಜರಾತ್​ನ ಸೂರತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಕೇಶ್​ ದಲಾಲ್​ ಅವರು ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ.

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಿದೆ.

ಈ ಕುರಿತು ಬಿಜೆಪಿ ಗುಜರಾತ್​ ರಾಜ್ಯ ಘಟಕದ ಅಧ್ಯಕ್ಷ ಪಕ್ಷದ ಗುಜರಾತ್ ಘಟಕದ ಮುಖ್ಯಸ್ಥ ಸಿಆರ್ ಪಾಟೀಲ್ ಅವರು ಸೋಮವಾರ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಮೊದಲ ಕಮಲವನ್ನು ಉಡುಗೊರೆಯಾಗಿ ಸೂರತ್ ನೀಡಿದೆ. ಅವಿರೋಧವಾಗಿ ಆಯ್ಕೆಯಾದ ನಮ್ಮ ಪಕ್ಷದ ಅಭ್ಯರ್ಥಿ ಮುಕೇಶ್ ಅವರಿಗೆ ಅಭಿನಂದನೆಗಳು ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿಯ ದಲಾಲ್ ಮತ್ತು ಕಾಂಗ್ರೆಸ್ಸಿನ ಕುಂಭಾನಿ ಹೊರತುಪಡಿಸಿ, ಸೂರತ್ ಲೋಕಸಭಾ ಸ್ಥಾನಕ್ಕೆ ಇನ್ನೂ ಎಂಟು ಮಂದಿ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದರು. ಬಹುಜನ ಸಮಾಜ ಪಾರ್ಟಿಯ ಪ್ಯಾರೇಲಾಲ್ ಭಾರತಿ ಕಣದಿಂದ ಹಿಂದಕ್ಕೆ ಸರಿದರು. ಇದರ ಜೊತೆಗೆ, ಏಳು ಇತರರು ಮತ್ತು ಪಕ್ಷೇತರರು ಕೂಡಾ ನಾಮಪತ್ರ ಹಿಂದಕ್ಕೆ ಪಡೆದ ನಾಟಕೀಯ ಬೆಳವಣಿಗೆ ನಡೆದಿದೆ.

ಇದು ದೇಶದ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸಂಸದರಾಗಿ ಆಯ್ಕೆಯಾದ ಕ್ಷೇತ್ರವಾಗಿದೆ. 1989ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಅಂದರೆ ಒಮ್ಮೆಯೂ ಕಾಂಗ್ರೆಸ್​ ಗೆದ್ದ ಇತಿಹಾಸವೇ ಇಲ್ಲ. ಬಿಜೆಪಿಯ ಅಭ್ಯರ್ಥಿ ಮುಕೇಶ್ ದಲಾಲ್ ಗೆಲುವಿನ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಕೇಂದ್ರ ಚುನಾವಣಾಧಿಕಾರಿಗಳು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net