More

    ಈ ವರ್ಷವೂ ಅತಿಥಿ ಶಿಕ್ಷಕರು ಅನಿವಾರ್ಯ

    ರೋಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾಯಂ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಈ ಬಾರಿಯೂ ಅತಿಥಿ ಶಿಕ್ಷಕರೇ ಅನಿವಾರ್ಯ ಎಂಬ ಆತಂಕ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಮೂಡಿದೆ.

    ತಾಲೂಕಿನಲ್ಲಿ 158 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಹಳ್ಳಿಯಲ್ಲಿನ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

    ಹೀಗಾಗಿ ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯಾರ್ಥಿಗಳಿಂದ ಪಾಠ ನಡೆಯುತ್ತಿದ್ದರೆ, ಮತ್ತೊಂದೆಡೆ ಅತಿಥಿ ಶಿಕ್ಷಕರನ್ನು ನಿಯೋಜಿಸಿ ವರ್ಷವಿಡೀ ಕಳೆಯಲಾಗಿದೆ. ತಾಲೂಕಿನ ಗಡಿ ಭಾಗದ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದ್ದರೂ ಇಲಾಖೆ ಅಧಿಕಾರಿಗಳು ಅವುಗಳನ್ನು ಭರ್ತಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಲಿದೆ.

    393 ಹುದ್ದೆ ಖಾಲಿ: ತಾಲೂಕಿನಲ್ಲಿ 31 ಸರ್ಕಾರಿ ಪ್ರೌಢಶಾಲೆಗಳಿವೆ. ಮುಖ್ಯ ಶಿಕ್ಷಕರ 27 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 16 ಶಿಕ್ಷಕರನ್ನು ನೇಮಕ ಮಾಡಿದೆ. ಸಹ ಶಿಕ್ಷಕರ 289 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 207 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಸೇರಿ 82 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 40 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಇನ್ನು 42 ಪ್ರಾಥಮಿಕ ಶಾಲೆಗಳಲ್ಲಿ 1064 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿ 753 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 311 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 158 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. 153 ಶಿಕ್ಷಕರ ಕೊರತೆ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಇದೆ.

    ಖಾಸಗಿ ಶಾಲೆಯತ್ತ ಪಾಲಕರ ಚಿತ್ತ

    ರೋಣ, ಗಜೇಂದ್ರಗಡ, ಹೊಳೆಆಲೂರ, ನರೇಗಲ್ಲ ಸೇರಿ ಬಹುತೇಕ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುವ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆದರೆ, ಅಲ್ಲಿ ನೂರಾರು ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳಿಗೆ ಸರಿಯಾಗಿ ಶಿಕ್ಷಣ ಸಿಗುತ್ತಿಲ್ಲ ಎಂಬ ಆರೋಪ ಇದೆ. ಹೀಗಾಗಿ ಪಾಲಕರು ಈಗ ಖಾಸಗಿ ಶಾಲೆಯತ್ತ ಮುಖ ಮಾಡುವಂತಾಗಿದೆ.

    ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಕಳೆದ ಸಲವೂ ಖಾಲಿ ಹುದ್ದೆ ಇರುವ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗಿದೆ. ಕಳೆದ ವರ್ಷವೇ ಶಿಕ್ಷಕರ ನೇಮಕಾತಿ ನಡೆದಿದೆ. ಸರ್ಕಾರ ನೇಮಕ ಮಾಡಿಕೊಂಡಿರುವ ಶಿಕ್ಷಕರಿಗೆ ಆದೇಶ ನೀಡಿ ಸ್ಥಳ ನಿಯುಕ್ತಿ ಮಾಡಿದರೆ ಅನುಕೂಲವಾಗುತ್ತದೆ.
    >ಗಾಯಿತ್ರಿ ಸಜ್ಜನ್ , ಕ್ಷೇತ್ರ ಶಿಕ್ಷಣಾಧಿಕಾರಿ ರೋಣ

    ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದಂತಾಗಿದೆ. ಕಳೆದ ವರ್ಷ ನೇಮಕ ಮಾಡಿಕೊಂಡಿದ್ದ ಶಿಕ್ಷಕರಿಗೆ ಶೀಘ್ರ ಸ್ಥಳ ನಿಯುಕ್ತಿ ಮಾಡಬೇಕು. 4-5 ಹುದ್ದೆಗಳು ಖಾಲಿ ಇರುವ ಕಡೆಗೆ ಕನಿಷ್ಠ 3 ಹುದ್ದೆಗಳನ್ನು ಭರ್ತಿಗೊಳಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
    > ಅವಿನಾಶ ಸಾಲಿಮನಿ, ಶಿಕ್ಷಣಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts